ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೋವಿಡ್ ನಿಯಮ ಉಲ್ಲಂಘನೆ ಕುರಿತು ವರದಿ ಸಲ್ಲಿಸಿ: ಹೈಕೋರ್ಟ್

ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರು ಕೋವಿಡ್ ಮತ್ತು ಲಾಕ್ ಡೌನ್ ನಿಯಮ ಉಲ್ಲಂಘನೆ ಕುರಿತ ವಿವರಗಳನ್ನು ಸರ್ಕಾರ ಹೊಸದಾಗಿ ರಚಿಸಿರುವ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಶುಕ್ರವಾರ ಅರ್ಜಿದಾರರಿಗೆ ಸೂಚನೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರು ಕೋವಿಡ್ ಮತ್ತು ಲಾಕ್ ಡೌನ್ ನಿಯಮ ಉಲ್ಲಂಘನೆ ಕುರಿತ ವಿವರಗಳನ್ನು ಸರ್ಕಾರ ಹೊಸದಾಗಿ ರಚಿಸಿರುವ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಹೈಕೋರ್ಟ್ ಶುಕ್ರವಾರ ಅರ್ಜಿದಾರರಿಗೆ ಸೂಚನೆ ನೀಡಿದೆ. 

ಕೋವಿಡ್‌ ನಿಯಮ ಉಲ್ಲಂಘನೆಗಳ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ಈ ಸೂಚನೆಯನ್ನು ನೀಡಿದೆ. 

ನಮ್ಮ ಮೆಟ್ರೊ ಕೆಂಗೇರಿ ಮಾರ್ಗದ ತಪಾಸಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಹಾಗೂ ಅವರ ಜತೆ ಇದ್ದ ಸಚಿವರಾದ ಆರ್.ಅಶೋಕ, ಬಸವರಾಜ ಬೊಮ್ಮಾಯಿ ಮತ್ತು ವಿ. ಸೋಮಣ್ಣ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಹೊಸಕೊಟೆಯಲ್ಲಿ ಸಚಿವ ಎಂ.ಟಿ.ಬಿ. ನಾಗರಾಜ್ ಭಾಗವಹಿಸಿದ್ದ ಕಾರ್ಯಕ್ರಮ, ಬೆಳಗಾವಿ ಶಾಸಕ ಅಭಯ ಪಾಟೀಲ ಭಾಗವಹಿಸಿದ್ದ ಮತ್ತೊಂದು ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲೂ ನಿಯಮ ಪಾಲನೆಯಾಗಿಲ್ಲ’ ಎಂದು ಗೀತಾ ಮಿಶ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಗೀತಾ ಮಿಶ್ರಾ ಪರ ವಕೀಲರಾದ ಜಿ.ಆರ್.ಮೋಹನ್ ಅವರು ವಾದ ಮಂಡಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕೋವಿಡ್ ಹಾಗೂ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗಳ ಕುರಿತು ಸರ್ಕಾರ ಹೊಸದಾಗಿ ರಚಿಸಿರುವ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ. 

ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಸರ್ಕಾರ, ಕೋವಿಡ್‌ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ದೂರುಗಳನ್ನು ದಾಖಲಿಸಲು ಹೊಸ ವ್ಯವಸ್ಥೆಯೊಂದನ್ನು ರೂಪಿಸಲಾಗಿದೆ ಎಂದು ತಿಳಿಸಿತು. 

ಈ ವೇಳೆ ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ರೀತಿಯ ಆ್ಯಪ್‌ಗಳ ಮೂಲಕವೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ, ವಾಟ್ಸ್‌ಆ್ಯಪ್ ಮತ್ತು ಟೆಲಿಗ್ರಾಮ್ ರೀತಿಯ ಆ್ಯಪ್‌ಗಳ ಮೂಲಕವೂ ದೂರು ಸಲ್ಲಿಸಲು ಅವಕಾಶ ಕಲ್ಪಿಸಬೇಕು ನಿರ್ದೇಶನ ನೀಡಿತು. 

ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಅವರ ಪತ್ನಿ ಕೊರೋನಾ ಲಾಕ್ಡೌನ್ ನಿಯಮ ಉಲ್ಲಂಘಿಸುತ್ತಿರುವ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಂದ ವರದಿ ಕೇಳಲಾಗಿದೆ ಇದೇ ವೇಳೆ ನ್ಯಾಯಾಲಯಕ್ಕೆ ಸರ್ಕಾರ ತಿಳಿಸಿದೆ. 

ಕೊರೋನಾ ಲಾಕ್ಡೌನ್ ಉಲ್ಲಂಘಿಸಿದ್ದ ಬಿವೈ ವಿಜಯೇಂದ್ರ ಹಾಗೂ ಅವರ ಪತ್ನಿ ಮೇ.18 ರಂದು ನಂಜನಗೂಡಿನಲ್ಲಿರುವ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com