ರಾಜ್ಯದಲ್ಲಿ ಕೊರೋನಾ 2ನೇ ಅಲೆ ಕ್ಷೀಣ: ಇನ್ನೆರಡು ವಾರ ಕಾದು ನೋಡುವಂತೆ ಸರ್ಕಾರಕ್ಕೆ ತಜ್ಞರ ಸಲಹೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಇಳಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಅಬ್ಬರ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ತಜ್ಞರು ಮಾತ್ರ ಇನ್ನೆರಡು ವಾರಗಳ ಕಾದು ನೋಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನಕಳೆದಂತೆ ಇಳಿಕೆಯಾಗುತ್ತಿದ್ದು, ಕೊರೋನಾ 2ನೇ ಅಲೆ ಅಬ್ಬರ ಕಡಿಮೆಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ತಜ್ಞರು ಮಾತ್ರ ಇನ್ನೆರಡು ವಾರಗಳ ಕಾದು ನೋಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಹಾಗೂ ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆಯಾಗುವವರೆಗೂ ಕೊರೋನಾ 2ನೇ ಅಲೆ ಕಡಿಮೆಯಾಗಿದೆ ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಸರ್ಕಾರ ಇನ್ನೆರಡು ವಾರಗಳ ಕಾಲ ಕಾದು ನೋಡಬೇಕಿದೆ. ಕೊರೋನಾ ವೈರಸ್ ದುರ್ಬಲಗೊಂಡಿಲ್ಲ. ಇನ್ನೂ ಜೀವಂತವಾಗಿದೆ ಎಂದು ತಜ್ಞರು ಹೇಳಿದ್ದಾರೆ. 

ಕೋವಿಡ್-19 ಡೆಲ್ಟಾ ರೂಪಾಂತರ ವೈರಸ್ (ಬಿ.1.617) ಇನ್ನೂ ಜೀವಂತವಾಗಿದೆ. ಜನರು ಕೊರೋನಾ ನಿಯಮಗಳನ್ನು ಉಲ್ಲಂಘಿಸಿದ್ದೇ ಆದರೆ, ಮತ್ತೆ ಸೋಂಕು ವ್ಯಾಪಕಗೊಳ್ಳಲಿದೆ. ಸರ್ಕಾರದ ನಿರ್ಬಂಧಗಳನ್ನು ಹೇರಿರುವ ಕಾರಣ ಜನರ ಓಡಾಟಗಳಿಲ್ಲ. ಸರ್ಕಾರ ಲಾಕ್ಡೌನ್ ತೆರವುಗೊಳಿಸಿದರೆ, ಜನರು ಬೇವಾಬ್ದಾರಿಯುತವಾಗಿ ನಡೆದುಕೊಂಡಿದ್ದೇ ಆದರೆ, ಸೋಂಕು ಮತ್ತಷ್ಟು ಜನರಿಗೆ ಹರಡಲಿದೆ ಎಂದು ರಾಜ್ಯ ಕೋವಿಡ್ ತಜ್ಞರ ಸಮಿತಿಯ ಸದಸ್ಯ ಹಾಗೂ ರೋಗಾಣು ಶಾಸ್ತ್ರಜ್ಞ ಡಾ.ವಿ.ರವಿಯವರು ಹೇಳಿದ್ದಾರೆ. 

ಬೆಂಗಳೂರಿನ ಭಾರತೀಯ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಗಿರಿಧರ್ ಬಾಬು ಅವರು ಮಾತನಾಡಿ, ರೂಪಾಂತರಗಳು ಅಸ್ತಿತ್ವದಲ್ಲಿರುತ್ತವೆ. ಆದರೆ, ಅವುಗಳ ತೀವ್ರತೆ ಕಡಿಮೆಯಾಗಿರುತ್ತದೆ. ಪ್ರತೀ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿಯೂ ಸೋಂಕು ತೀವ್ರಗತಿಯಲ್ಲಿ ಸಾಗಿ ನಂತರ ಕಾಲಕ್ರಮೇಣ ಇಳಿಕೆಯಾಗುತ್ತದೆ. ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತೇವೆ, ಜನರು ಯಾವ ರೀತಿ ವರ್ತಿಸುತ್ತಾರೆ ಎಂಬುದರ ಮೇಲೆ ವೈರಸ್ ಅಬ್ಬರದ ಅವಧಿಯನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. 

ಹೆಚ್ಚೆಚ್ಚು ಪರೀಕ್ಷೆಗಳನ್ನು ನಡೆಸಿ, ಎಷ್ಟು ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತವೆ ಎಂಬುದರ ಮೇಲೆ ಕೊರೋನಾ ಎರಡನೇ ಅಲೆ ಯಾವ ಮಟ್ಟದಲ್ಲಿದೆ ಎಂಬುದನ್ನು ಸೂಕ್ತ ರೀತಿಯಲ್ಲಿ ನಿರ್ಧರಿಸಬಹುದಾಗಿದೆ. ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದರೆ ಉತ್ತಮ ಬೆಳವಣಿಗೆಯಾಗಿರಲಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಪ್ರದೀಪ್ ಬನಂದೂರ್ ಅವರು ಮಾತನಾಡಿ, ಕೊರೋನಾ ಎರಡನೇ ಅಲೆ ನಿಯಂತ್ರಣ ಕುರಿತು ನಿರ್ಧಾರ ಕೈಗೊಳ್ಳಲು ಇನ್ನೆರಡು ವಾರಗಳ ಕಾಲ ಕಾಯಬೇಕಿದೆ. ಸೋಂಕಿನ ಸೂಚಕ ಶೇ.1.1ಕ್ಕಿಂತ ಕಡಿಮೆ ಇರಬೇಕು. ಆದರೆ, ರಾಜ್ಯದಲ್ಲಿ ಶೇ.1.8ರಷ್ಟಿದೆ ಎಂದು ಹೇಳಿದ್ದಾರೆ. 

ಕೊರೋನಾ ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥ ಡಾ.ಎಂ.ಕೆ.ಸುದರ್ಶನ್ ಅವರು ಮಾತನಾಡಿ, ಜೂನ್ ಅಂತ್ಯದ ವೇಳೆಗೆ ಕೊರೋನಾ ಎರಡನೇ ಅಲೆ ಅಂತ್ಯಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇನ್ನೂ ಸೋಂಕು ಪ್ರಕರಣಗಳು ಹೆಚ್ಚಾಗಿಯೇ ಇದೆ. ಬೆಂಗಳೂರು ನಗರ, ಮೈಸೂರು ಹಾಗೂ ತುಮಕೂರಿನಲ್ಲಿ ಸೋಂಕು ಹೆಚ್ಚಾಗಿದೆ. ರಾಜ್ಯದ ದೈನಂದಿನ ಪ್ರಕರಣಗಳ ಸಂಖ್ಯೆ 5,000ಕ್ಕಿಂತ ಕಡಿಮೆಯಾಗುವವರೆಗೆ ಹಾಗೂ ಸಾವಿನ ಪ್ರಮಾಣ ಶೇ.1ಕ್ಕೆ ಇಳಿಯುವವರೆಗೂ ಕಠಿಣ ಲಾಕ್ಡೌನ್ ಅಗತ್ಯವಿದೆ ಎಂದು ಹೇಳಿದ್ದಾರೆ. 

ರಾಜ್ಯದಾದ್ಯಂತ ಲಾಕ್ಡೌನ್ ಹೇರುವ ಬದಲು ಕಂಟೈನ್ಮೆಂಟ್ ಝೋನ್ ಗಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕಿದೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರ ಪರೀಕ್ಷೆಗಳ ಸಂಖ್ಯೆಯನ್ನು 1.2 ಲಕ್ಷದಿಂದ 1.3ಲಕ್ಷಕ್ಕೆ ಏರಿಕೆ ಮಾಡಿದೆ. ಲಾಕ್ಡೌನ್ ಪ್ರಯೋಜನವನ್ನು ಯಾವ ರೀತಿ ಪಡೆಯಬೇಕೆಂಬುದನ್ನು ಇದೀಗ ಜನರಿಗೆ ಬಿಟ್ಟದ್ದು ಎಂದು ಬನಂದೂರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com