ನಗರದಲ್ಲಿ ಕೊರೋನಾ ಪ್ರಕರಣಗಳಲ್ಲಿ ಇಳಿಕೆ: ಮರಳಿ ಸಿಲಿಕಾನ್ ಸಿಟಿಗೆ ವಾಪಸ್ಸಾಗುತ್ತಿರುವ ಜನತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಾಂಡ್ ಮತ್ತು ಇತರೆ ಜಿಲ್ಲೆಗಳು, ಇತರೆ ಗ್ರಾಮಗಳಿಂದ ಜನರು ಮರಳಿ ಸಿಲಿಕಾನ್ ಸಿಟಿಗೆ ವಾಪಸ್ಸಾಗುತ್ತಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಾಂಡ್ ಮತ್ತು ಇತರೆ ಜಿಲ್ಲೆಗಳು, ಇತರೆ ಗ್ರಾಮಗಳಿಂದ ಜನರು ಮರಳಿ ಸಿಲಿಕಾನ್ ಸಿಟಿಗೆ ವಾಪಸ್ಸಾಗುತ್ತಿದ್ದಾರೆ. 

ನಗರದಲ್ಲಿ ಕೊರೋನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ತವರು ರಾಜ್ಯ ಕೇರಳಕ್ಕೆ ತೆರಳಿದ್ದ ಮೇಘನಾ ಎಂಬ ಮಹಿಳೆಯ ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಬೆಂಗಳೂರಿನಲ್ಲಿ ಪ್ರತಿನಿತ್ಯ 27 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿತ್ತು. ಹೀಗಾಗಿ ಸುರಕ್ಷಿತವಾಗಿರಲು ಬಸ್ ಮೂಲಕ ತವರು ರಾಜ್ಯಕ್ಕೆ ತೆರಳಿದ್ದೆ ಎಂದು ಮಹಿಳೆ ಹೇಳಿದ್ದಾರೆ. 

ಸೋಂಕು ಪ್ರಕರಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ತಲೆದೋರಿತ್ತು. ಒಂದು ವೇಳೆ ಸೋಂಕು ತಗುಲಿ ನನಗೆ ಆಕ್ಸಿಜನ್ ಸಿಗದೇ ಹೋದರೆ ಎಂಬ ಆತಂಕ ನನ್ನನ್ನು ಕಾಡಿತ್ತು. ಪ್ರತೀನಿತ್ಯ ಸೋಂಕು ಪ್ರಕರಣವನ್ನು ಗಮನಿಸುತ್ತಲೇ ಇದ್ದೆ. ಇದೀಗ ನಗರದಲ್ಲಿ ಸೋಂಕು ಇಳಿಕೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಕೂಡ ಇಳಿಕೆಯಾಗಿದೆ. ಇದೀಗ ಬೆಂಗಳೂರಿಗೆ ವಾಪಸ್ಸಾಗಿದ್ದೇನೆ. ಅಲ್ಲದೆ, ಮೊದಲನೇ ಡೋಸ್ ಕೊರೋನಾ ಲಸಿಕೆ ಪಡೆದುಕೊಂಡಿದ್ದೇನೆ. ಈಗಲೂ ಹೊರಗೆ ಹೋಗಲು ನನಗೆ ಭಯವಿದೆ. ಆದರೆ, ತುರ್ತು ಕೆಲಸವಿದ್ದ ಕಾರಣ ವಾಪಸ್ಸಾಗಲೇ ಬೇಕಿತ್ತು ಎಂದು ತಿಳಿಸಿದ್ದಾರೆ. 

ತುಮಕೂರು ಮೂಲದ 29 ವರ್ಷದ ವ್ಯಕ್ತಿಯೊಬ್ಬರು ಮಾತನಾಡಿ, ಶನಿವಾರ ಬೆಳಿಗ್ಗೆಯಷ್ಟೇ ಬೆಂಗಳೂರಿಗೆ ವಾಪಸ್ಸಾಗಿದ್ದೇನೆ. ರಾಜ್ಯದಲ್ಲಿ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಇರಲು ಇಷ್ಟವಾಗದೆ ತುಮಕೂರಿಗೆ ವಾಪಸ್ಸಾಗಿದ್ದೆ. ನಾನು ಕೆಲಸ ಮಾಡುವ ಕಂಪನಿ ಕೂಡ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಕೊಟ್ಟಿತ್ತು. ಇದೀಗ ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದು, ಮರಳಿ ಕೆಲಸಕ್ಕೆ ಬರುವಂತೆ ಕಂಪನಿಯವರು ಸೂಚಿಸಿದ್ದಾರೆ. ಸೋಂಕು ಪ್ರಕರಣ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಯಾಣ ಮಾಡುವುದಕ್ಕೂ ಸುರಕ್ಷಿತ ಎನಿಸುತ್ತದೆ ಎಂದು ಹೇಳಿದ್ದಾರೆ. 

ಜಾರ್ಖಾಂಡ್ ಮೂಲದವರಾಗಿರುವ ರುಕ್ಶರ್ ಎಂಬುವವರು ಮಾತನಾಡಿ, ಸೋಂಕು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿಯಾಗುವುದಕ್ಕೂ ಮುನ್ನವೇ ನಗರ ತೊರೆದಿದ್ದೆ. ನಾನು ಕೆಲಸ ಮಾಡುವ ಕಂಪನಿ ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿತ್ತು. ಇದೀಗ ಸೋಂಕು ಪ್ರಕರಣ ಇಳಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗಲು ಬಯಸ್ಸಿದ್ದೇನೆ. ಬೆಂಗಳೂರಿಗೆ ಬರಲು ವಿಮಾನದ ನಿರೀಕ್ಷೆಯಲ್ಲಿದ್ದೇನೆಂದು ತಿಳಿಸಿದ್ದಾರೆ. 

ಗೂಗಲ್‌ನ ಭಾಷಾ ತಜ್ಞರಾಗಿರುವ ಮೊಹಮ್ಮದ್ ಫಹಾದ್ ಅವರು ಮಾತನಾಡಿ, ಸಾಂಕ್ರಾಮಿಕ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಕಲಬುರಗಿಗೆ ವಾಪಸ್ಸಾಗಿದ್ದೆ. ಇದೀಗ ಕೆಲಸದ ಉದ್ದೇಶದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದೇನೆ. ತವರು ಜಿಲ್ಲೆಗಳಲ್ಲಿ ಸುದೀರ್ಘ ಕಾಲ ಉಳಿಯಲು ಸಾಧ್ಯವಿಲ್ಲ. ಕೋವಿಡ್-19 ಪರಿಸ್ಥಿತಿಯನ್ನು ಲೆಕ್ಕಿಸದೆ ಕೆಲವು ಸಮಯದಲ್ಲಿ ಮರಳಬೇಕಾಗಿ ಬರುತ್ತದೆ. ನಾನು ಜೂನ್ 14ರಂದು ಮರಳಲು ಬಯಸಿದ್ದೆ. ಆದರೆ, ಇದೀಗ ಅನಿವಾರ್ಯವಾಗಿ ಬೆಂಗಳೂರಿಗೆ ವಾಪಸ್ಸಾಗಿದ್ದೇನೆಂದು ಹೇಳಿದ್ದಾರೆ. 

ಇದೇ ರೀತಿ ಸಾಕಷ್ಟು ಜನರು ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ವಾಪಸ್ಸಾಗಲು ಬಯಸುತ್ತಿದ್ದಾರೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಸಂಚಾರ ಸಮಸ್ಯೆಗಳು ಎದುರಾಗುತ್ತಿವೆ. ಲಾಕ್ಡೌನ್ ತೆರವುಗೊಳ್ಳುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಜನರು ನಗರಕ್ಕೆ ವಾಪಸ್ಸಾಗುವ ನಿರೀಕ್ಷೆಗಳಿವೆ. ಜೂನ್ ಕೊನೆಯ ವಾರ ಅಥವಾ ಜುಲೈ ಮೊದಲನೇ ವಾರದಲ್ಲಿ ಎಲ್ಲಾ ಕಚೇರಿಗಳೂ ಎಂದಿನಂತೆ ಆರಂಭವಾಗುವ ಸಾಧ್ಯತೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com