ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ; ವೃತ್ತಿಪರ ಕೋರ್ಸ್ ಪ್ರವೇಶಕ್ಕಾಗಿ ಸಿಇಟಿ ಅಂಕ ಮಾತ್ರವೇ ಪರಿಗಣನೆ: ಡಾ. ಸಿ.ಎನ್. ಅಶ್ವತ್ಥ ನಾರಾಯಣ
ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಬಾರಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಿಗದಿಯಾಗಿರುವಂತೆ ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
Published: 08th June 2021 12:42 PM | Last Updated: 08th June 2021 04:31 PM | A+A A-

ಸಿ.ಎನ್.ಅಶ್ವತ್ಥ ನಾರಾಯಣ
ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಬಾರಿ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿದೆ ಎಂದು ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಎರಡನೇ ಅಲೆ ಕಾರಣ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.
ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ, “ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ನೀಡಿರುವ ಸಲಹೆ ಪರಿಗಣಿಸಲಾಗಿದೆ" ಎಂದರು.
"ಪಿಯುಸಿ ಅಂಕಗಳ ವಿಚಾರವಾಗಿ ನೀತಿಯಲ್ಲಿ ಅಗತ್ಯ ತಿದ್ದುಪಡಿ ತರಲಾಗುವುದು. ಪದವಿ ಕಾಲೇಜುಗಳಿಗೆ, ಇತರ ಕೋರ್ಸ್‌ಗಳಿಗೆ ಪ್ರವೇಶ ನೀಡುವ ದೃಷ್ಟಿಯಿಂದ ಅಗತ್ಯವಿರುವ ಪೂರ್ವ ಸಿದ್ಧತಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಜ್ಞಾನ ವಿಭಾಗದ ಡಿಗ್ರಿ ವಿದ್ಯಾರ್ಥಿಗಳ ಪ್ರವೇಶವನ್ನು ಸಿಇಟಿ ಮುಖಾಂತರವೇ ನಿರ್ಧರಿಸುವ ಚಿಂತನೆ ಇದೆ"ಎಂದಿದ್ದಾರೆ.
ಇದಾಗಲೇ ನಿಗದಿಯಾಗಿರುವಂತೆ ಆಗಸ್ಟ್ 28, 29ಕ್ಕೆ ಸಿಇಟಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಾರಿ ಸಿಇಟಿ ಪರೀಕ್ಷೆಯನ್ನು ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಆಗಸ್ಟ್ 28, 29 ಹಾಗೂ 30ರಂದು ನಡೆಸಲಾಗುವುದು. ಆಗಸ್ಟ್ 28 - ಜೀವಶಾಸ್ತ್ರ, ಗಣಿತ, ಆಗಸ್ಟ್ 29 - ಭೌತಶಾಸ್ತ್ರ, ರಸಾಯನಶಾಸ್ತ್ರ, ಆಗಸ್ಟ್ 30 - ಗಡಿನಾಡು, ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
ಇನ್ನು ಈ ಬಾರಿ ಪರೀಕ್ಷೆ ಮಾನದಂಡ ಸಹ ಬದಲಾಗಿದ್ದು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಟಿ ಬರೆಯಲು ಅವಕಾಶ ಕಲ್ಪಿಸಲಾಗುವುದು. ಈ ಹಿಂದೆ ಪಿಯುಸಿನಲ್ಲಿ ತೇರ್ಗಡೆಯಾಗಿದ್ದವರು ಕನಿಷ್ಟ ಶೇ.40-45 ಅಂಕ ಪಡೆದವರಿಗೆ ಮಾತ್ರ ಸಿಇಟಿ ಬರೆಯಲು ಅವಕಾಶವಿತ್ತು,
ಇಂದಿನ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರಲ್ಲದೆ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್, ಕಾಲೇಜು ಶಿಕ್ಷಣ ಆಯುಕ್ತ ಪ್ರದೀಪ್, ಕೆಇಎ ಅಧಿಕಾರಿಗಳು ಹಾಜರಿದ್ದರು.