ಕೊರೋನಾ 3ನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸಿದ್ಧತೆ: ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು 1,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ

ಕೋವಿಡ್‌ ಸಂಭವನೀಯ ಮೂರನೇ ಅಲೆ ಸೇರಿದಂತೆ ಯಾವುದೇ ಬಿಕ್ಕಟ್ಟು ಎದುರಿಸಲು ರಾಜ್ಯವನ್ನು ಸಜ್ಜುಗೊಳಿಸಲು ರೂ.1,500 ಕೋಟಿ ವೆಚ್ಚದಲ್ಲಿ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್‌ ಸಂಭವನೀಯ ಮೂರನೇ ಅಲೆ ಸೇರಿದಂತೆ ಯಾವುದೇ ಬಿಕ್ಕಟ್ಟು ಎದುರಿಸಲು ರಾಜ್ಯವನ್ನು ಸಜ್ಜುಗೊಳಿಸಲು ರೂ.1,500 ಕೋಟಿ ವೆಚ್ಚದಲ್ಲಿ ಆರೋಗ್ಯ ಮೂಲಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಸೋಮವಾರ ನಡೆದ ಕೋವಿಡ್‌ ಕಾರ್ಯಪಡೆ ಸಭೆಯ ಬಳಿಕ ಈ ವಿಷಯ ತಿಳಿಸಿದ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ, ‘ಮೂರು ತಿಂಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ’ ಎಂದು ಹೇಳಿದ್ದಾರೆ. 

‘16 ಜಿಲ್ಲಾಸ್ಪತ್ರೆಗಳು, 146 ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಸಮಾನವಾಗಿ ಅದೇ ಜಿಲ್ಲೆಗಳಲ್ಲಿರುವ ಇನ್ನೂ ಮೂರು ಆಸ್ಪತ್ರೆಗಳ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಕ್ರಿಯಾಯೋಜನೆ ಇದಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ 25 ಐಸಿಯು, 25 ಎಚ್‌ಡಿಯು ಹಾಗೂ 50 ಆಕ್ಸಿಜನ್‌ ಹಾಸಿಗೆ, ಎಲ್ಲ ರೀತಿಯ ಡಯಾಗ್ನಾಸ್ಟಿಕ್‌ ಸೌಲಭ್ಯ ಒದಗಿಸಲಾಗುವುದು’ ಎಂದು ತಿಳಿಸಿದರು.

‘4 ಸಾವಿರ ವೈದ್ಯರು, ಒಬ್ಬ ವೈದ್ಯರಿಗೆ ಮೂವರು ದಾದಿಯರು,  ಮೂವರು ಗ್ರೂಪ್‌ ‘ಡಿ’ ಸಿಬ್ಬಂದಿ ಅಗತ್ಯವಿದೆ. ಮೂಲಸೌಲಭ್ಯ ಮತ್ತು ಸಿಬ್ಬಂದಿ ವೇತನಕ್ಕೆ ರೂ. 1,500 ಕೋಟಿ ಅಂದಾಜಿಸಲಾಗಿದೆ. ಈ ಮೊತ್ತದಲ್ಲಿ ವಾರ್ಷಿಕ ರೂ.600 ಕೋಟಿ ವೇತನಕ್ಕೆ ವೆಚ್ಚವಾಗಲಿದೆ. ಉಳಿದಂತೆ ಕಟ್ಟಡ, ಆಕ್ಸಿಜನ್‌ ಜನರೇಟರ್‌, ವೆಂಟಿಲೇಟರ್‌, ಯಂತ್ರೋಪಕರಣ ಖರೀದಿಗೆ ರೂ.800 ಕೋಟಿ ವೆಚ್ಚ ಆಗಲಿದೆ. ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಡಿಸಿದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅರೆವೈದ್ಯ ಸಿಬ್ಬಂದಿ ಕೊರತೆ ನೀಗಿಸಲು ಎಸ್ಸೆಸ್ಸೆಲ್ಸಿ, ಪಿಯುಸಿ ಕಲಿತ 5 ಸಾವಿರ ಯುವ ಜನರಿಗೆ 3 ತಿಂಗಳ ಉಚಿತ ತರಬೇತಿಯನ್ನು ಜಿಲ್ಲಾ ಕೇಂದ್ರಗಳಲ್ಲಿ ನೀಡಲಾಗುವುದು. ಈ ವೇಳೆ ಮಾಸಿಕ ರೂ.5 ಸಾವಿರ ಗೌರವಧನ ನೀಡಲಾಗುವುದು’ ಎಂದು ಹೇಳಿದರು.

ಯೋಜನೆಯಲ್ಲಿ ಏನೇನಿದೆ...? 

  • 5 ಲಕ್ಷ ರೆಮ್ಡೆಸಿವಿರ್, 1 ಲಕ್ಷ ಆಯುಷ್-64 ಔಷಧ ಖರೀದಿ 
  • ಕಪ್ಪು ಶಿಲೀಂಧ್ರ ಚಿಕಿತ್ಸೆಗಾಗಿ ಔಷಧಿಗಳನ್ನು ಸಂಗ್ರಹಿಸುವುದು
  • ಸಂಪೂರ್ಣ ರಾಜ್ಯದ ಕೋವಿಡ್ ನಿರ್ವಹಣೆಯನ್ನು ತಡೆರಹಿತ ಮಾಹಿತಿ ಹರಿವಿನೊಂದಿಗೆ ಮೇಲ್ವಿಚಾರಣೆ ಮಾಡಲು ವಾರ್ ರೂಮ್ ಗಳೊಂದಿಗೆ ಸಂಯೋಜಿತ ಅಪ್ಲಿಕೇಶನ್
  • ಪ್ರತೀ ತಾಲೂಕಿನಲ್ಲಿ 25 ವೆಂಟಿಲೇಟರ್ ಸಹಿಯ ಐಸಿಯು ಬೆಡ್, 25 ಹೆಚ್'ಡಿಯು ಬೆಡ್
  • 3 ತಿಂಗಳ ಒಳಗೆ ಎಲ್ಲಾ ತಾಲೂಕಿನಲ್ಲೂ 100 ಆಕ್ಸಿಜನೇಟೆಡ್ ಬೆಡ್ ವ್ಯವಸ್ಥೆ.
  • ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ 20 ಕೆಎಲ್ ಸಂಗ್ರಹ ಸಾಮರ್ಥ್ಯ ಹೊಂದಿರುವ ಆಕ್ಸಿಜನ್ ಖರೀದಿಸಲು ಅನುಮೋದನೆ
  • ಶಿವಮೊಗ್ಗ ಮತ್ತು ಬೀದರ್‌ಗಾಗಿ ಸಿಟಿ ಸ್ಕ್ಯಾನರ್‌ಗಳ ಖರೀದಿಗೆ ಒಪ್ಪಿಗೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com