14,788 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ 2ಎ, 2ಬಿ ಯೋಜನೆಗೆ ಕೇಂದ್ರ ಸಮ್ಮತಿ

14,788 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ ಯೋಜನೆಯ 2ಎ, 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರೂ: 14,788 ಕೋಟಿ ರೂ. ವೆಚ್ಚದ ನಮ್ಮ ಮೆಟ್ರೋ ಯೋಜನೆಯ 2ಎ, 2ಬಿ ಹಂತಕ್ಕೆ ಕೇಂದ್ರ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ. 

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ನಗರ ಸಾರಿಗೆ ವಿಭಾಗ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಯೋಜನೆಗೆ ಒಪ್ಪಿಗೆ ನೀಡುವುದಾಗಿ ತಿಳಿಸಿದೆ. 

ಇದರೊಂದಿಗೆ ಮೆಟ್ರೋ ಯೋಜನೆಗೆ ಅಗತ್ಯವಾಗಿದ್ದ ಆಡಳಿತಾತ್ಮಕ ಒಪ್ಪಿಗೆಗಳೆಲ್ಲವೂ ಸಿಕ್ಕಂತಾಗಿದೆ. ಇತ್ತೀಚಿನ ಈ ಯೋಜನೆ ಬಗ್ಗೆ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2025ರ ಸೆಪ್ಟೆಂಬರ್ ಒಳಗೆ ಕಾಮಗಾರಿ ಮುಕ್ತಾಯಗೊಳಿಸಿ, ಕಾರ್ಯಾಚರಣೆಗೆ ಒಪ್ಪಿಸಿ ಎಂದು ಮೆಟ್ರೋ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

 ಈ ಯೋಜನೆಯು ಎರಡು ಹಂತದಲ್ಲಿ ಸಾಗಲಿದೆ. 2ಎಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರದವರೆಗೆ 19.75 ಕಿಮೀ ಮತ್ತು 2ಬಿಯಲ್ಲಿ ಕೆ.ಆರ್.ಪುರದಿಂದ ಹೆಬ್ಬಾಳ ಜಂಕ್ಷನ್ ಮೂಲಕ ದೇವನಹಳ್ಳಿ ವಿಮಾನ ನಿಲ್ದಾಣದವರೆಗೆ 38.44 ಕಿಮೀ ಉದ್ದದ ಮೆಟ್ರೋ ಮಾರ್ದ ಕಾಮಗಾರಿ ನಡೆಯಲಿದೆ. ಈ ಯೋಜನೆಗೆ ರೂ.14,788,101 ಕೋಟಿ ವೆಚ್ಚವಾಗಲಿದೆ. 

ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ಹೆಬ್ಬಾಳ ಫ್ಲೈಓವರ್‌ನಲ್ಲಿ ಮೆಟ್ರೋ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕು, ಫ್ಲೈಓವರ್ ಅನ್ನು ಕಿತ್ತುಹಾಕಬೇಕೇ ಅಥವಾ ಹೊಸ ಯೋಜನೆಗಳನ್ನು ರೂಪಿಸುವ ಅಗತ್ಯವಿದೆಯೇ ಎಂಬ ಬಗ್ಗೆ ವಿವರವಾದ ಚರ್ಚೆ ನಡೆಸುವ ಅಗತ್ಯವಿದೆ ಎಂದು ಹೇಳಿದ್ದಾರೆ. 

ಈ ನಡುವೆ ಯೋಜನೆ ಮತ್ತು ಅನುಮೋದನೆಗೆ ನಾಗರೀಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮೇಲ್ಸೇತುವೆ ಮುಖ್ಯವೆಂದು ಕೆಲವರು ಹೇಳುತ್ತಿದ್ದರೆ, ಇನ್ನೂ ಕೆಲವರು ನೀಡಲಾಗಿರುವ ಗಡುವಿನಲ್ಲೇ ಈ ಯೋಜನೆ ಪೂರ್ಣಗೊಳ್ಳುತ್ತದೆಯೇ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ನೈಋತ್ಯ ರೈಲ್ವೆ ಬೈಯಪ್ಪನಹಳ್ಳಿಗೆ ಸಂಪರ್ಕಿಸಿದ್ದ ವಿಮಾನ ನಿಲ್ದಾಣ ರೈಲು ಸೇವೆಗೆ ಎನಾಗಬಹುದು ಎಂಬುದರ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com