ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 1.5 ಲಕ್ಷ ವಾಹನಗಳ ಬಿಡುಗಡೆಗೆ ಹೈಕೋರ್ಟ್‌ ಅಸ್ತು

ಲಾಕ್‌ಡೌನ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು 1.5 ಲಕ್ಷ ವಾಹನಗಳನ್ನು ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್‌ಡೌನ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಪ್ತಿ ಮಾಡಲಾಗಿದ್ದ ಸುಮಾರು 1.5 ಲಕ್ಷ ವಾಹನಗಳನ್ನು ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡಲು ಸರ್ಕಾರಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.

ಪಿಐಎಲ್‌ ಅರ್ಜಿಗಳ ಮನವಿ ಆಲಿಸಿದ ಸಿಜೆ ಎ.ಎಸ್‌. ಓಕ್‌ ನೇತೃತ್ವದ ಪೀಠ, ದಂಡ ಪಾವತಿಸಿಕೊಂಡು ವಾಹನ ಬಿಡುಗಡೆ ಮಾಡಲು ಆದೇಶಿಸಿದೆ. 

ಕೊರೊನಾ ಸೋಂಕನ್ನು ನಿಯಂತ್ರಿಸಲು ಜಾರಿಯಲ್ಲಿದ್ದ ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿದವರಿಂದ ಪೊಲೀಸರು ಲಕ್ಷಾಂತರ ವಾಹನಗಳನ್ನು ಸೀಜ್ ಮಾಡಿದ್ದರು. ಇದರಿಂದ ಠಾಣೆಗಳ ಆವರಣದಲ್ಲಿ ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು. ಈ ಬಗ್ಗೆ ಸೂಕ್ತ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಕೋರ್ಟ್​ ಮೊರೆ ಹೋಗಿತ್ತು. 

ಸರ್ಕಾರದಿಂದ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಆದೇಶ ನೀಡಿದ್ದು, ರಾಜ್ಯದಲ್ಲಿ ವಶಪಡಿಸಿಕೊಂಡಿದ್ದ ಅಷ್ಟೂ ವಾಹನಗಳನ್ನು ಬಿಡುಗಡೆ​ ಮಾಡುವಂತೆ ​ಸೂಚನೆ ನೀಡಿದೆ. ವಾಹನ ಮಾಲೀಕರು ಕೋರ್ಟ್​​ಗಳತ್ತ ಬಂದು ಜನಸಂದಣಿ ಆಗುವುದು ಬೇಡ. ಜನ ಜಮಾವಣೆಯಾದರೆ ಮತ್ತೆ ಕೊರೊನಾ ಸೋಂಕು ಹಬ್ಬಲು ಸಹಕಾರಿಯಾಗುತ್ತದೆ. 

ಹಾಗಾಗಿ ‘ವಾಹನಗಳ ಮಾಲೀಕರು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್‌ ಠಾಣೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಮಾಲೀಕತ್ವ ಪರಿಶೀಲಿಸಿದ ನಂತರ ವಾಹನಗಳನ್ನು ಪೊಲೀಸರು ಹಸ್ತಾಂತರಿಸಬೇಕು. ದ್ವಿಚಕ್ರ ವಾಹನಗಳ ಮಾಲೀಕರಿಂದ ರೂ.500, ನಾಲ್ಕು ಚಕ್ರ ವಾಹನಗಳ ಮಾಲೀಕರಿಂದ ರೂ.1 ಸಾವಿರ, ಸರಕು ಸಾಗಣೆ ವಾಹನಗಳ ಮಾಲೀಕರಿಂದ ರೂ.2 ಸಾವಿರ ದಂಡ ಸಂಗ್ರಹಿಸಬೇಕು’ ಎಂದು ಪೀಠ ತಿಳಿಸಿತು. 

ಭವಿಷ್ಯದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಂದ ಇದೇ ರೀತಿಯ ದಂಡ ಪಡೆದು ವಾಹನಗಳನ್ನು ಮಾಲೀಕರ ವಶಕ್ಕೆ ನೀಡಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. 

ಸಂಚಾರಿ ಪೊಲೀಸರು ಈ ವರೆಗೋೂ ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದ 1,37,503 ದ್ವಿಚಕ್ರ ವಾಹನಗಳು, 7,432 ನಾಲ್ಕು ಚಕ್ರದ ವಾಹನಗಳು ಹಾಗೂ 7,123 ಇತರೆ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಎಲ್ಲಾ ವಾಹನಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದೇ ಆದರೆ, ಇದರಿಂದ ರೂ.9 ಕೋಟಿ ಆದಾಯ ಬರುವ ಸಾಧ್ಯತೆಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com