ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳಲ್ಲಿ ಮಾರ್ಪಾಡು: 11 ಜಿಲ್ಲೆಗಳಲ್ಲಿ ಪೂರ್ಣ, 19 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ಜಾರಿ
ರಾಜ್ಯದ ಕೆಲವು ಭಾಗಗಳಲ್ಲಿ ಕೋವಿಡ್-19 ಸೋಂಕು ಪ್ರಸರಣ ಇಳಿಕೆಯಾಗುತ್ತಿದ್ದು, ಜೂನ್ 10 ರಂದು ಸಿಎಂ ಯಡಿಯೂರಪ್ಪ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದ್ದಾರೆ.
Published: 10th June 2021 08:29 PM | Last Updated: 10th June 2021 08:50 PM | A+A A-

ಯಡಿಯೂರಪ್ಪ
ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಕೋವಿಡ್-19 ಸೋಂಕು ಪ್ರಸರಣ ಇಳಿಕೆಯಾಗುತ್ತಿದ್ದು, ಜೂನ್ 10 ರಂದು ಸಿಎಂ ಯಡಿಯೂರಪ್ಪ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದ್ದಾರೆ.
"ಕೋವಿಡ್-19 ತಡೆ ನಿಟ್ಟಿನಲ್ಲಿ ತಾಂತ್ರಿಕ ಸಲಹಾ ಸಮಿತಿಯ ಸಲಹೆಗಳ ಮೇರೆಗೆ ಈಗಿರುವ ನಿರ್ಬಂಧಗಳಲ್ಲಿ ಕೆಲವು ಮಾರ್ಪಾಡು/ಸಡಿಲಿಕೆಗಳನ್ನು ಮಾಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಪರಿಷ್ಕೃತ ನೀತಿಯ ಪ್ರಕಾರವಾಗಿ ರಾಜ್ಯದ 11 ಜಿಲ್ಲೆಗಳಲ್ಲಿ ಮತ್ತೆ ಪೂರ್ಣ ಪ್ರಮಾಣದ ಲಾಕ್ ಡೌನ್ ಮುಂದುವರೆಸಿದರೆ, ಉಳಿದ 19 ಜಿಲ್ಲೆಗಳಲ್ಲಿ ಸೆಮಿ ಲಾಕ್ ಡೌನ್ ನ್ನು ಘೋಷಣೆ ಮಾಡಲಾಗಿದೆ.
ಇದೇ ವೇಳೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಅಂದರೆ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಗೆ ಸಂಬಂಧಿಸಿದ ನಿಯಮಗಳು ಯಥಾಸ್ಥಿತಿ ಮುಂದುವರೆಯುತ್ತದೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ಉಳಿದ ಜಿಲ್ಲೆಗಳಲ್ಲಿ ಪರಿಷ್ಕೃತ ನಿಯಮಗಳು ಜೂನ್ 14 ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಕೋವಿಡ್-19 ಪ್ರಸರಣ ಪ್ರಮಾಣ ಕಡಿಮೆ ಇರುವ ಜಿಲ್ಲೆಗಳಲ್ಲಿ ಸಡಿಲಿಕೆಯಾದ ನಿರ್ಬಂಧಗಳ ಬಗ್ಗೆ ಮಾಹಿತಿ ಹೀಗಿದೆ..
- ಎಲ್ಲಾ ಕಾರ್ಖಾನೆಗಳನ್ನು ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಆದರೆ, ಗಾರ್ಮೆಂಟ್ ಕೈಗಾರಿಕೆಗಳಿಗೆ ಮಾತ್ರ ಶೇ. 30 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ.
- ಎಲ್ಲಾ ಅಗತ್ಯ ಪದಾರ್ಥ ಖರೀದಿಸುವುದಕ್ಕೆ ಅನುವು ಮಾಡಿಕೊಡಲು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
- ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಹಾಗೂ ನಿಮಾಣ ಚಟುವಟಿಕೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ.
- ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
- ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
- ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
- ಕೋವಿಡ್ ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಿಗ್ಗ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
- ರಾಜ್ಯಾದ್ಯಂತ ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.