ಕೊರೋನಾ ಎಫೆಕ್ಟ್: ಹೂವು ಖರೀದಿಗೆ ಬಾರದ ಜನ; ಸಂಕಷ್ಟದಲ್ಲಿ ಬೆಳೆಗಾರರು, ಮಾರಾಟಗಾರರು!

ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಮದುವೆ, ಸಮಾರಂಭಗಳ ಮೇಲೆ ಸರ್ಕಾರ ನಿರ್ಬಂಧಗಳನ್ನು ಹೇರಿರುವುದರಿಂದ ಹೂವು ಖರೀದಿಗೆ ಜನರು ಮುಂದಕ್ಕೆ ಬಾರದ ಹಿನ್ನೆಲೆಯಲ್ಲಿ ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ಜಾರಿಯಲ್ಲಿದ್ದು, ಮದುವೆ, ಸಮಾರಂಭಗಳ ಮೇಲೆ ಸರ್ಕಾರ ನಿರ್ಬಂಧಗಳನ್ನು ಹೇರಿರುವುದರಿಂದ ಹೂವು ಖರೀದಿಗೆ ಜನರು ಮುಂದಕ್ಕೆ ಬಾರದ ಹಿನ್ನೆಲೆಯಲ್ಲಿ ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

ಕೆ.ಆರ್.ಮಾರುಕಟ್ಟೆಯಲ್ಲಿರುವ ಅಂಗಡಿ ಮಾಲೀಕರು ಕೂಡ ಅಂಗಡಿಗಳನ್ನು ತೆರಯದ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಏಷ್ಯಾದ ಅತೀ ದೊಡ್ಡ ಮಾರುಕಟ್ಟೆ ಏನಿಸಿಕೊಂಡಿರುವ ಕೆ.ಆರ್.ಮಾರುಕಟ್ಟೆ ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ 238 ದಿನಗಳಿಂದ ಬಂದ್ ಆಗಿದೆ. 

ಮಾರುಕಟ್ಟೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ದುರಸ್ತಿ ಕಾರ್ಯ ನಡೆಸುತ್ತಿದೆ. 

ರಾಜ್ಯ ಸರ್ಕಾರ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದರು, ಈ ಸಮಯದಲ್ಲಿ ಕೆ.ಆರ್.ಮಾರುಕಟ್ಟೆ ತೆರೆಯುವ ಲಕ್ಷಣಗಳು ಕಾಣುತ್ತಿಲ್ಲ. 2020ರಲ್ಲಿ ಕೊರೋನಾ ಪರಿಣಾಮ 159 ದಿನ ಬಂದ್ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 79 ದಿನಗಳಿಂದ ಬಂದ್ ಮಾಡಲಾಗಿದೆ. 

ಕೆ.ಆರ್.ಮಾರುಕಟ್ಟೆ ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್ ಅವರು ಮಾತನಾಡಿ, ಮಾರುಕಟ್ಟೆಯಲ್ಲಿ 2,200 ಮಾರಾಟಗಾರರಿದ್ದಾರೆ. ಎಲ್ಲರೂ ಹೂವು, ಹಣ್ಣು, ಪೂಜಾ ಸಾಮಾಗ್ರಿಗಳು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ, ಅಗತ್ಯ ವಸ್ತು ಮಾರಾಟಗಾರರೂ ಇದ್ದಾರೆ. ಇದರಲ್ಲಿ 300ರಷ್ಟು ಅಂಗಡಿಯವರು ಬೀದಿಬದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲದೆ, ಮದುವೆ ಸಮಾರಂಭಗಳಿಗೆ ಹೂವಿನ ಹಾರ ತಯಾರಿಸುತ್ತಾರೆ. ಅಂತಹವರಿಗೆ ಬಂಬೂ ಬಜಾರ್ ನಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ. 

ಕೋಲಾರ, ಚಿಕ್ಕಬಳ್ಳಾಪುರ, ಆನೇಕಲ್, ಮಾಲೂರು, ದೊಡ್ಡಬಳ್ಳಾಪುರ, ರಾಮನಗರ ಸೇರಿದಂತೆ ಇನ್ನಿತರೆ ಪ್ರದೇಶಗಳಿಂದ ಹೂವುಗಳು ಬರುತ್ತವೆ. ಪ್ರತೀನಿತ್ಯ 100 ಟ್ರಕ್ ಗಳು ಹೂವುಗಳನ್ನು ಬಳಕೆ ಮಾಡುತ್ತಿದ್ದೆವು. ಆದರೆ, ಇದೀಗ ಈ ಸಂಖ್ಯೆ 20-25ಕ್ಕೆ ಇಳಿಕೆಯಾಗಿದೆ. ಪ್ರತೀ ಟ್ರಕ್ 800-1200 ಕೆಜಿ ಹೂವುಗಳನ್ನು ಹೊತ್ತು ತರುತ್ತವೆ ಎಂದು ಮಾಹಿತಿ ನೀಡಿದ್ದಾರೆ. 

ಮದುವೆ ಹಾಗೂ ಇತರೆ ಸಮಾರಂಭಗಳು ಇಲ್ಲದ ಸಂದರ್ಭದಲ್ಲಿ ಹೂವು ಮಾರಾಟ ಕಡಿಮೆಯಾಗುತ್ತಿತ್ತು. ಆದರೆ, ಹಬ್ಬ ಹಾಗೂ ಮದುವೆ ಸಮಯದಲ್ಲೇ ಹೂವಿನ ಮಾರಾಟ ಕಡಿಮೆಯಾಗಿದೆ ಎಂದು ಹೂವು ಮಾರಾಟಗಾರ ಮಹೇಶ್ ಎಂಬುವವರು ಹೇಳಿದ್ದಾರೆ. 

ಜನರು ತರಕಾರಿ ಹಾಗೂ ಹಣ್ಣುಗಳನ್ನು ಖರೀದಿ ಮಾಡುತ್ತಿದ್ದಾರೆ. ಆದರೆ, ಸಾಂಕ್ರಾಮಿಕ ರೋಗ ಪರಿಣಾಮ ಹೂವುಗಳನ್ನು ಖರೀದಿ ಮಾಡುತ್ತಿಲ್ಲ. ಬೆಳಿಗ್ಗೆ 6-10 ಗಂಟೆಯವರೆಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಆದರೆ, ರಾತ್ರಿವರೆಗೂ ಈ ಹೂವನ್ನು ಇಟ್ಟುಕೊಂಡು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಬೆಂಗಳೂರು ಒಂದರಲ್ಲಿಯೇ 20,000 ಕ್ಕೂ ಹೆಚ್ಚು ಬೀದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿ ಮಾರಾಟಗಾರರಿದ್ದಾರೆ. ಈ ಮಾರಾಟಗಾರರಿಗೆ 2,000 ರೂ. ಪರಿಹಾರ ನೀಡುವ ಭರವಸೆಯನ್ನು ಸರ್ಕಾರ  ನೀಡಿದೆ, ಆದರೆ ಈ ಹಣ ಯಾವುದಕ್ಕೂ ಸಾಕಾಗುವುವಿದಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಮಾರಾಟಗಾರರಷ್ಟೇ ಅಲ್ಲ, ಹೂವು ಬೆಳೆಗಾರರು ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಪ್ರತೀ ಹೆಕ್ಟೇರ್‌ಗೆ (2.5 ಎಕರೆ) 10,000 ರೂ ಪರಿಹಾರ ನೀಡುತ್ತಿದೆ. ಆದರೆ, ಹೂವು ಬೆಳೆಗಾರರು ಪ್ರತೀ ಎಕರೆಯಲ್ಲಿ ಹೂವು ಬೆಳೆಯಲು ರೂ.60 ಸಾವಿರದಿಂದ ರೂ.1 ಲಕ್ಷ ಖರ್ಚು ಮಾಡುತ್ತಾರೆಂದು ಹೊಸಕೋಟೆ ಹೂವಿನ ಮಾರಾಟಗಾರ ಶ್ರೀನಿವಾಸಪ್ಪ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com