ಜನತೆಗೆ ರಾಜ್ಯ ಸರ್ಕಾರದ ಶಾಕ್: ವಿದ್ಯುತ್ ಬೆಲೆ 3.8% ಹೆಚ್ಚಳ, ಸರಾಸರಿ ಯೂನಿಟ್ ಗೆ 30 ಪೈಸೆ ಏರಿಕೆ; ಏಪ್ರಿಲ್ 1 ರಿಂದ ಪೂರ್ವಾನ್ವಯ!

ಪೆಟ್ರೋಲ್ ಹಾಗೂ ಡೀಸೆಲ್ ಬಳಿಕ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಜನತೆಗೆ ದೊಡ್ಡ ಶಾಕ್ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಬಳಿಕ ವಿದ್ಯುತ್ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರ ಜನತೆಗೆ ದೊಡ್ಡ ಶಾಕ್ ನೀಡಿದೆ. 

ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (ರೂ.1.35) ಬೆಲೆ ಏರಿಕೆ ಕೋರಿ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶವಾಗಿ ಪರಿಶೀಲಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

ಇದರಂತೆ ಪ್ರತಿ ಯೂನಿಟ್'ಗೆ ಸರಾಸರಿ 30 ಪೈಸೆಯಂತೆ ವಿದ್ಯುತ್ ದರವನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿದೆ. ಇದರ ಪರಿಣಾಮ ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಯೂನಿಟ್'ಗೆ 10 ಪೈಸೆ ಹೆಚ್ಚಳವಾಗಲಿದೆ. 

ಗೃಹ ಬಳಕೆದಾರರಿಗೆ ಮೊದಲ ಸ್ಲ್ಯಾಬ್ ಪರಿಷ್ಕರಣೆ ಮಾಡಲಾಗಿದ್ದು 0-30 ಯೂನಿಟ್ ವರೆಗೆ ಇದ್ದ ಮಿತಿಯನ್ನು 50 ಯೂನಿಟ್ ವರೆಗೆ ವಿಸ್ತರಿಸಲಾಗಿದೆ. ಜೊತೆಗೆ ನಿಗದಿತ ಶುಲ್ಕವನ್ನೂ ಹೆಚ್ಚಳ ಮಾಡಿದ್ದು ಪ್ರತಿ ಕಿಲೋ ವ್ಯಾಟ್'ಗೆ ರೂ.10 ಗಳಂತೆ ಪರಿಷ್ಕರಣೆ ಮಾಡಲಾಗಿದೆ. 

ಎಲ್ಲಾ ಎಸ್ಕಾಂಗಳಿಗೂ ಏಕರೂಪದ ದರ ಹೆಚ್ಚಳ ಮಾಡಲಾಗಿದ್ದು, ಪರಿಷ್ಕೃತ ದರ ಏ.1ರಿಂದಲೇ ಪೂರ್ವಾನ್ವಯವಾಗಲಿದ್ದು, ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಏಪಿರಿಲ್, ಮೇ. ತಿಂಗಳ ದರ ಪರಿಷ್ಕರಣೆ ಬಾಕಿಯನ್ನು ಯಾವುದೇ ಬಡ್ಡಿ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ವಸೂಲಿ ಮಾಡಲು ಎಸ್ಕಾಂಗಳಿಗೆ ಆದೇಶ ನೀಡಿದೆ. 

ಬೆಸ್ಕಾಂ ವ್ಯಾಪ್ತಿಯ ಬಿಬಿಎಂಪಿ ಹಾಗೂ ಪುರಸಭೆ ಪ್ರದೇಶಗಳಲ್ಲಿ ಗೃಹ ಬಳಕೆದಾರರು, ಸರ್ಕಾರಿ, ಧರ್ಮಾರ್ಥ ಸಂಸ್ಥೆಗಳು ನಡೆಸುವ ವಿದ್ಯಾಸಂಸ್ಥೆ, ಆಸ್ಪತ್ರೆಗಳ ವಿದ್ಯುತ್ ಶಕ್ತಿ ದರರವನ್ನು ಯೂನಿಟ್'ಗೆ 10 ಪೈಸೆ ಹೆಚ್ಚಳ ಮಾಡಲಾಗಿದೆ. ಇತರೆ ಎಸ್ಕಾಂಗಳ ನಗರ ಪಾಲಿಕೆ ಹಾಗೂ ಪುರಸಭೆ ಪ್ರದೇಶ, ಗ್ರಾಮ ಪಂಚಾಯಿತಿ ಪ್ರದೇಶಗಳಲ್ಲಿ ಪ್ರತಿ ಯೂನಿಟ್ ಬಳಕೆಗೆ 10 ಪೈಸೆಯಂತೆ ಹೆಚ್ಚಳ ಮಾಡಲಾಗಿದೆ. 

0-50 ಯೂನಿಟ್ ಮಾಸಿಕ ಬಳಕೆ ಸ್ಲ್ಯಾಬ್'ಗೆ ಪ್ರತಿ ಯೂನಿಟ್'ಗೆ ಇದ್ದ ರೂ.4ಗಳನ್ನು ರೂ.4.10, 51-100 ಯೂನಿಟ್ ಬಳಕೆಗೆ ರೂ.5.45 ಗಳಿಂದ ರೂ.5.55, 101-100 ಯೂನಿಟ್'ಗೆ ರೂ.7 ರಿಂದ ರೂ.7.10, 200 ಯೂನಿಟ್ ಗಳಿಗಿಂತ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್'ಗೆ ರೂ.8.05 ಇದ್ದ ಶುಲ್ಕವನ್ನು ರೂ.8.15ಕ್ಕೆ ಏರಿಕೆ ಮಾಡಲಾಗಿದೆ. 

ಉಳಿದಂತೆ ಬೆಸ್ಕಾಂ ವ್ಯಾಪ್ತಿಯ ಗ್ರಾಮ ಪಂಚಾಯಿಟಿ ಅಡಿಯ ಗೃಹ ಬಳಕೆದಾರರಿಗೆ 0-50 ಯೂನಿಟ್'ಗೆ ರೂ.3.90ರಿಂದ ರೂ.4, 51-100 ಯೂನಿಟ್'ಗೆ ರೂ.5.15ರಿಂದ ರೂ.5.25, 101-200 ಯೂನಿಟ್'ಗೆ ರೂ.6.70ರಿಂದ ರೂ.6.80 200 ಯೂನಿಟ್ ಮೇಲ್ಪಟ್ಟ ಬಳಕೆಗಿದ್ದ ರೂ.7.55 ರಿಂದ ರೂ.7.65ಕ್ಕೆ ಪರಿಷ್ಕರಿಸಲಾಗಿದೆ. 

ರಾಜ್ಯದ ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆ, ಸ್ಥಳೀಯ ನಗರಸಂಸ್ಥೆಗಳ ಚುನಾವಣೆ ಘೋಷಣೆ ಕಾರಣ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ದರ ಪರಿಷ್ಕರಣೆ ಆದೇಶ ಹೊರಡಿಸುವುದು ವಿಳಂಬವಾಯಿತು. ಕೊವಿಡ್ ಸೋಂಕು ತಡೆಯಲು ಲಾಕ್​ಡೌನ್ ನಿರ್ಬಂಧ ಹೇರಿದ ಕಾರಣ ಆಯೋಗದ ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ತೊಂದರೆಯಾಯಿತು ಎಂದು ಆಯೋಗ ಕಾರಣ ನೀಡಿದೆ.

“ಈ ಆದೇಶವು ಏಪ್ರಿಲ್ 1 ರಿಂದ ಜಾರಿಗೆ ಬಂದಿರುವುದರಿಂದ, ಏಪ್ರಿಲ್ ಮತ್ತು ಮೇ ತಿಂಗಳಿಗೆ ಬಾಕಿ ಮೊತ್ತವನ್ನು ಯಾವುದೇ ಬಡ್ಡಿದರ ವಿಧಿಸದೆ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಸಂಗ್ರಹಿಸುವಂತೆ ಸೂಚಿಸಲಾಗಿದೆ.. ಪ್ರತಿ ಯೂನಿಟ್‌ಗೆ 1.39 ರೂ.ಗಳನ್ನು ಹೆಚ್ಚಿಸಬೇಕೆಂದು ನಾವು ಒತ್ತಾಯಿಸಿದ್ದೆವು. ಆದರೆ ಆಯೋಗವು 12 ತಿಂಗಳಲ್ಲಿ 856 ಕೋಟಿ ರೂ. ಸಂಗ್ರಹಿಸುವಂತೆ ಸೂಚಿಸಿದೆ, ಇದೇ ಕಾರಣಕ್ಕೆ ತೆರಿಗೆಯನ್ನು ಸ್ಲ್ಯಾಬ್ ಎಂದು ಲೆಕ್ಕಹಾಕಲಾಗುತ್ತಿದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದ್ದಾರೆ. 

ಎಫ್‌ಕೆಸಿಸಿಐನ ವಿದ್ಯುತ್ ತಜ್ಞ ಎಂ ಜಿ ಪ್ರಭಾಕರ್ ಅವರು ಮಾತನಾಡಿ, ಪ್ರೋತ್ಸಾಹಕ ಯೋಜನೆ ಮುಂದುವರೆದಿರುವುದು ಸಂತಸ ತಂದಿದೆ. ವಿದ್ಯುತ್ ಮಾರಾಟ ಮಾಡುವ ಬದಲು ಅದನ್ನು ಕೈಗಾರಿಕೆಗಳಿಗೆ ನೀಡಬಹುದಿತ್ತು. ಆತಂಕ ವಿಚಾರವೆಂದರೆ ಕೋವಿಡ್ ಮತ್ತು ಕಾರ್ಮಿಕ ಸಮಸ್ಯೆಗಳಿಂದಾಗಿ ಡಿಸೆಂಬರ್ ವರೆಗೆ ಕೈಗಾರಿಕಾ ಕ್ಷೇತ್ರಗಳು ಹೆಚ್ಚಿನ ವಿದ್ಯುತ್ ಬಳಕೆ ಮಾಡಿಲ್ಲ, ಜೂನ್ ವೇಳೆಗೆ ಹೆಚ್ಚಿನ ವಿದ್ಯುತ್ ಬಳಕೆಯಾಗುವ ಸಾಧ್ಯತೆಗಳಿವೆ. ಈಗಾಗಲೇ ಜೂನ್ ತಿಂಗಳು ಬಂದಿದ್ದು, ಕೈಗಾರಿಕಾ ಕ್ಷೇತ್ರಗಳು ಎಷ್ಟು ಪ್ರಮಾಣದ ವಿದ್ಯುತ್ ಬಳಕೆ ಮಾಡುತ್ತವೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಆಯೋಗವು ಈ ಕ್ಷೇತ್ರಗಳಲ್ಲಿನ ಅಂತರವನ್ನು ಮತ್ತು ಕೈಗಾರಿಕೆಗಳಿಗೆ ಪೂರೈಸುವ ಅಗತ್ಯವನ್ನು ಗುರುತಿಸಿರುವುದು ಸಂತದ ವಿಚಾರವಾಗಿದೆ ಎಂದು ಹೇಳಿದ್ದಾರೆ.  

ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ ನಾಯಕ್ ಅವರು ಮಾತನಾಡಿ, ಈ ಪರಿಷ್ಕರಣೆಯು ರಾಜ್ಯದಲ್ಲಿ ವಿದ್ಯುತ್ ಪರಿಸ್ಥಿತಿ ಉತ್ತಮವಾಗಿದೆ ಎಂಬ ಸಂದೇಶವನ್ನು ಕೈಗಾರಿಕಾ ಕ್ಷೇತ್ರಗಳಿಗೆ ನೀಡಲಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿಯೂ ಪುಟಿದೇಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಸಂದೇಶವನ್ನೂ ರವಾನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com