ಜಾರಕಿಹೊಳಿ ಸಿಡಿ ಪ್ರಕರಣ: ಎಸ್‌ಐಟಿ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಸಂತ್ರಸ್ತೆ!

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ. 

ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕ ಸದಸ್ಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಮತ್ತು ಎಸ್‌ಐಟಿಗೆ ನೋಟಿಸ್‌ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲರು, ''ಎಸ್‌ಐಟಿ ರಚನೆ ಮಾಡುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಗೃಹ ಸಚಿವರು 2021ರ ಮಾ.10ರಂದು ಬರೆದ ಪತ್ರ ರದ್ದುಪಡಿಸಬೇಕು. ಮಾ.11ರಂದು ಎಸ್‌ಐಟಿ ರಚಿಸಿದ ಆದೇಶ ರದ್ದುಪಡಿಸಬೇಕು ಮತ್ತು ಎಸ್‌ಐಟಿ ಈವರೆಗೂ ನಡೆಸಿರುವ ತನಿಖೆ ರದ್ದುಗೊಳಿಸಬೇಕು. ಹೈಕೋರ್ಟ್‌ ಮೇಲ್ವಿಚಾರಣೆಯಲ್ಲಿ ಹೊಸದಾಗಿ ತನಿಖೆ ನಡೆಸುವುದಕ್ಕೆ ತನಿಖಾ ಸಂಸ್ಥೆ ಅಥವಾ ಹೊಸ ತನಿಖಾ ತಂಡ ನೇಮಿಸಬೇಕು," ಎಂದು ಕೋರಿದರು.

''ಅತ್ಯಾಚಾರ ಪ್ರಕರಣದಲ್ಲಿ ವೈದ್ಯಕಿಯ ಪರೀಕ್ಷೆ ನಡೆಸುವುದು ಕಡ್ಡಾಯ. ಅದಕ್ಕಾಗಿ ರಕ್ತದ ಮಾದರಿ, ಕೂದಲು, ವೀರ್ಯ, ಗಂಟಲು ದ್ರವ ಮತ್ತು ಉಗುರು ಸೇರಿ ಮುಂತಾದವುಗಳನ್ನು ಪಡೆದು ಡಿಎನ್‌ಎ ಪರೀಕ್ಷೆ ನಡೆಸಬೇಕು. ಆದರೆ, ಈ ಪ್ರಕರಣದಲ್ಲಿ ಆರೋಪಿ ರಮೇಶ್‌ ಜಾರಕಿಹೊಳಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದು ಕೇವಲ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದ್ದಾರೆ. ಆದರೆ, ನಿಯಮಗಳ ಪ್ರಕಾರ ನಡೆಸಬೇಕಾದ ಕಡ್ಡಾಯ ವೈದ್ಯಕೀಯ ಪರೀಕ್ಷೆ ನಡೆಸಿಲ್ಲ," ಎಂದು ಅರ್ಜಿಯಲ್ಲಿ ದೂರಲಾಗಿದೆ.

''ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಹಚ್ಚಲು ಮತ್ತು ಕೋರ್ಟ್‌ ವಿಚಾರಣೆ ಪ್ರಕ್ರಿಯೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯು ಮಹತ್ವದ ಪಾತ್ರ ವಹಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಪ್ರಕರಣದಿಂದ ರಮೇಶ್‌ ಜಾರಕಿಹೊಳಿ ರಕ್ಷಣೆ ಮಾಡುವುದಕ್ಕಾಗಿ ಎಸ್‌ಐಟಿ ಉದ್ದೇಶ ಪೂರ್ವಕವಾಗಿ ಸೂಕ್ತ ತನಿಖೆ ನಡೆಸಿಲ್ಲ" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

"ಈಗಾಗಲೇ ತನಿಖೆ ಸಾಕಷ್ಟು ವಿಳಂಬವಾಗಿದೆ. ಪ್ರಕರಣ ದಾಖಲಾಗಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದಾರೆ. ಆರೋಪಿಗೆ ಗೃಹ ಸಚಿವರೊಂದಿಗೆ ನಿಕಟ ಸಂಪರ್ಕವಿದೆ. ಹೀಗಾಗಿ, ಸರಕಾರ ನೇಮಿಸಿದ ತಂಡದಿಂದ ನ್ಯಾಯಸಮ್ಮತ ಹಾಗೂ ಪಾರದರ್ಶಕ ತನಿಖೆ ಸಾಧ್ಯವಿಲ್ಲ" ಎಂದು ಸಂತ್ರಸ್ತೆ ದೂರಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com