ಸಿದ್ದಲಿಂಗಯ್ಯ ನಿಧನ: ಸಿಎಂ ಯಡಿಯೂರಪ್ಪ ಸೇರಿ ಗಣ್ಯರ ಕಂಬನಿ

ದಲಿತ ಕವಿ, ಡಾ. ಸಿದ್ದಲಿಂಗಯ್ಯ (66) ಕೊರೋನಾದಿಂದ ನಿಧನರಾಗಿದ್ದಾರೆ. ಹಿರಿಯ ಕವಿ, ಬಂಡಾಯ, ದಲಿತ ಸಾಹಿತ್ಯದ ಮೇರು ಧ್ವನಿಯಾಗಿದ್ದ ಸಿದ್ದಲಿಂಗಯ್ಯನವರ ನಿಧನಕ್ಕೆ ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.
ಸಿದ್ದಲಿಂಗಯ್ಯ
ಸಿದ್ದಲಿಂಗಯ್ಯ

ಬೆಂಗಳೂರು: ದಲಿತ ಕವಿ, ಡಾ. ಸಿದ್ದಲಿಂಗಯ್ಯ (66) ಕೊರೋನಾದಿಂದ ನಿಧನರಾಗಿದ್ದಾರೆ. ಹಿರಿಯ ಕವಿ, ಬಂಡಾಯ, ದಲಿತ ಸಾಹಿತ್ಯದ ಮೇರು ಧ್ವನಿಯಾಗಿದ್ದ ಸಿದ್ದಲಿಂಗಯ್ಯನವರ ನಿಧನಕ್ಕೆ ಮುಖ್ಯಮಂತ್ರಿ ಬಿ,ಎಸ್, ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.

ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

"ದಲಿತರ ನೋವನ್ನು ಸಮರ್ಥವಾಗಿ ಅಕ್ಷರ ರೂಪಕ್ಕಿಳಿಸಿ, ಅವರನ್ನು ಜಾಗೃತಗೊಳಿಸಿದವರು ಡಾ. ಸಿದ್ದಲಿಂಗಯ್ಯ. ನೋವಿನ ಕೆಂಡವನ್ನೇ ಒಡಲೊಳಗಿರಿಸಿಕೊಂಡ ಅವರ ಕವನಗಳು ದಲಿತ ಚಳವಳಿಗೆ ಕಾವು ನೀಡಿತ್ತು. ವಿಧಾನ ಪರಿಷತ್ ಸದಸ್ಯರಾಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅನನ್ಯ ಸೇವೆ ಸಲ್ಲಿಸಿದ್ದ ಅವರ ನಿಧನದಿಂದ, ಸಾಮಾಜಿಕ ಕಳಕಳಿಯ ಅಪೂರ್ವ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು, ಅವರ ಕುಟುಂಬ, ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ" ಎಂದು ಮುಖ್ಯಮಂತ್ರಿಗಳು ಪ್ರಾರ್ಥಿಸಿದ್ದಾರೆ

"ಕಾವ್ಯವನ್ನೇ ಖಡ್ಗವನ್ನಾಗಿಸಿ ಸಾಮಾಜಿಕ‌‌ ಸಮಾನತೆಯ ಹೋರಾಟವನ್ನು‌ ಮುನ್ನಡೆಸಿದ್ದ ದಲಿತ ಕವಿ, ವಿಧಾನಪರಿಷತ್‌ನ ಮಾಜಿ ಸದಸ್ಯ ಮತ್ತು ನನ್ನ ಆತ್ಮೀಯ ಮಿತ್ರ ಸಿದ್ದಲಿಂಗಯ್ಯನವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.ಸಾವನ್ನು ಮೀರಿದ ಸಾಹಿತ್ಯದ ಮೂಲಕ ಅವರು ಅಜರಾಮರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ." ಸಿದ್ದರಾಮಯ್ಯ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. 

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ "ಹಿರಿಯ ಕವಿ, ಸಾಹಿತಿ ಡಾ. ಸಿದ್ದಲಿಂಗಯ್ಯ ನವರು ವಿಧಿವಶರಾಗಿರುವ ವಿಷಯ ತಿಳಿದು ಮನಸ್ಸಿಗೆ ತುಂಬಾ ಆಘಾತವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ  ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ." ಎಂದು ಹೇಳಿದ್ದಾರೆ.

"ಖ್ಯಾತ ಕವಿ, ದಲಿತ ಸಾಹಿತಿ ಡಾ. ಸಿದ್ದಲಿಂಗಯ್ಯ ನವರು ವಿಧಿವಶರಾಗಿರುವ ವಿಷಯ ತಿಳಿದು ಮನಸ್ಸಿಗೆ ಆಘಾತವಾಗಿದೆ. ಡಾ.ಸಿದ್ದಲಿಂಗಯ್ಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ.ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ  ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ." ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com