ಬೆಳಗಾವಿ ಜಿಲ್ಲೆ ಬಡಚಿ ಗ್ರಾಮ: 30 ದಿನಗಳಲ್ಲಿ 60 ಮಂದಿ ಕೊರೋನಾಗೆ ಬಲಿ? ಅಧಿಕಾರಿಗಳು ಏನಂತಾರೆ?
ಬೆಳಗಾವಿ ಜಿಲ್ಲೆಯಲ್ಲಿರುವ ಬಡಚಿ ಎಂಬ ಸಣ್ಣ ಗ್ರಾಮದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು, ಕೇವಲ ಒಂದು ತಿಂಗಳಿನಲ್ಲಿ ಗ್ರಾಮದಲ್ಲಿ ಬರೋಬ್ಬರಿ 60 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
Published: 12th June 2021 11:37 AM | Last Updated: 12th June 2021 01:02 PM | A+A A-

ಸಂಗ್ರಹ ಚಿತ್ರ
ಅಥಣಿ: ಬೆಳಗಾವಿ ಜಿಲ್ಲೆಯಲ್ಲಿರುವ ಬಡಚಿ ಎಂಬ ಸಣ್ಣ ಗ್ರಾಮದಲ್ಲಿ ಕೊರೋನಾ ಮಹಾಮಾರಿ ಆರ್ಭಟ ಹೆಚ್ಚಾಗಿದ್ದು, ಕೇವಲ ಒಂದು ತಿಂಗಳಿನಲ್ಲಿ ಗ್ರಾಮದಲ್ಲಿ ಬರೋಬ್ಬರಿ 60 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಅಥಣಿ ತಾಲೂಕಿನಲ್ಲಿ ಬರುವ ಬಡಚಿ ಗ್ರಾಮದಲ್ಲಿ ಒಟ್ಟಾರೆ 7,000 ಜನಸಂಖ್ಯೆಯಿದೆ. ಗ್ರಾಮದಲ್ಲಿ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಆರೋಗ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮದಲ್ಲಿ ಸಾಕಷ್ಟು ಜನರು ಬಡತನದಿಂದ ಬಳಲುತ್ತಿದ್ದು, ಸೋಂಕಿಗೊಳಗಾದವರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತ ಬಲವಿಲ್ಲ. ಕೆಲವರು ಸಾಮಾಜಿಕ ಕಳಂಕ, ತಾರತಮ್ಯದ ಆತಂಕಕ್ಕೊಳಗಾಗಿ ಆಸ್ಪತ್ರೆಗೆ ಭೇಟಿ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಈ ನಡುವೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಗ್ರಾಮಸ್ಥರದಲ್ಲಿ ಜಾಗೃತಿ ಮೂಡಿಸಲುವಲ್ಲಿ ವಿಫಲರಾಗಿದ್ದಾರೆನ್ನಲಾಗುತ್ತಿದೆ.
ಸರ್ಕಾರದ ಆದೇಶದಂತೆ ಅಂಗನವಾಡಿ ಶಿಕ್ಷಕರು ಹಾಗೂ ಆರೋಗ್ಯ ಕಾರ್ಯಕರ್ತರು ಪ್ರತೀ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ಜನರಲ್ಲಿ ಕೊರೋನಾ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಆದರೆ, ಈ ಕಾರ್ಯ ಮಾಡುವಲ್ಲಿ ಆರೋಗ್ಯಾಧಿಕಾರಿಗಳು ವಿಫಲರಾಗಿದ್ದಾರೆಂದು ಗ್ರಾಮದ ನಿವಾಸಿಗಳು ಹೇಳಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಲ್'ಎಸ್ ಭಾಗೇನವರ್ ಮಾತನಾಡಿ, ಗ್ರಾಮದಲ್ಲಿ ಕಳೆದ 1 ತಿಂಗಳಿನಲ್ಲಿ 60 ಮಂದಿ ಸಾವನ್ನಪ್ಪಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲರೂ ಕೊರೋನಾ ಸೋಂಕಿನಿಂದಲೇ ಸಾವನ್ನಪ್ಪಿಲ್ಲ, ಕೋವಿಡೇತರ ಸಮಸ್ಯೆಗಳು ಹಾಗೂ ವೃದ್ದಾಪ್ಯ ಸಮಸ್ಯೆಗಳಿಂದಾಗಿ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಗ್ರಾಮದಲ್ಲಿ ಆರೋಗ್ಯಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಕೋವಿಡ್-19 ಕರ್ತವ್ಯ ನಿಭಾಯಿಸುತ್ತಿರುವುದರ ಬಗ್ಗೆ ಭಾಗೇನವರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮರ್ ಅವರು ಮಾತನಾಡಿ, ಆರೋಗ್ಯಾಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತ ನಿರ್ಲಕ್ಷ್ಯ ವರ್ತನೆ ಕುರಿತು ಈಗಾಗಲೇ ಗ್ರಾಮಸ್ಥರು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ವರದಿ ಸಲ್ಲಿಕೆಯಾದ ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.