ಬ್ಲ್ಯಾಕ್ ಫಂಗಸ್: ಹುಬ್ಬಳ್ಳಿ ಕಿಮ್ಸ್'ನಲ್ಲಿ 90 ಮಂದಿ ಸೋಂಕಿತರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕಳೆದ ಮೂರು ವಾರಗಳಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯ ವೈದ್ಯರು ಬರೋಬ್ಬರಿ 90 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹುಬ್ಬಳ್ಳಿ: ಕಳೆದ ಮೂರು ವಾರಗಳಲ್ಲಿ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಯ ವೈದ್ಯರು ಬರೋಬ್ಬರಿ 90 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೊಳಗಾದವರು ಹಾಗೂ ನೆರೆ ಜಿಲ್ಲೆಗಳಲ್ಲಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಕೊರೋನಾ 2ನೇ ಅಲೆಯಲ್ಲಿ ಒಟ್ಟು 147 ಮಂದಿ ಬ್ಲ್ಯಾಕ್ ಫಂಗಸ್ ಸೋಂಕಿಗೊಳಗಾದಿದ್ದು, ಎಲ್ಲರಿಗೂ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 8 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಆಸ್ಪತ್ರೆಯಲ್ಲಿ 120 ಮಂದಿ ಸೋಂಕಿತರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಪ್ರತೀನಿತ್ಯ 4-5 ಮಂದಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿಯವರು ಮಾತನಾಡಿ, ಇಂತಹ ಪ್ರಕರಣಗಳನ್ನು ನಿಭಾಯಿಸಲು ನಮ್ಮಲ್ಲಿ ತಜ್ಞರ ತಂಡವಿದೆ. ಬೇರಾವುದೇ ಸಂಸ್ಥೆ ಹಾಗೂ ಆಸ್ಪತ್ರೆಗಳು ಇಷ್ಟು ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ನಡೆಸಿಲ್ಲ. ಆರಂಭದಲ್ಲಿ ಆಸ್ಪತ್ರೆ ಆಂಫೊಟೆರಿಸಿನ್-ಬಿ ಔಷಧಿ ಕೊರತೆಯನ್ನು ಎದುರಿಸಿತ್ತು. ಬಳಿಕ ಸರ್ಕಾರ ಸೋಂಕಿಗೆ ಚಿಕಿತ್ಸೆ ನೀಡಬಲ್ಲ ಇತರೆ ಔಷಧಿಗಳ ಬಳಕೆಗೆ ಅವಕಾಶ ನೀಡಿತ್ತು. ಇದೀಗ ಆಸ್ಪತ್ರೆಯಲ್ಲಿ ಅಗತ್ಯವಿರುವ ಔಷಧಿಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ. 

ಕಿಮ್ಸ್ ಆಸ್ಪತ್ರೆಯ ಇಎನ್'ಟಿ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಗದಗ್ ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾದ ಬಹುತೇಕ ಸೋಂಕಿತರಿಗೆ ಶಸ್ತ್ರಚಿಕಿತ್ಸೆ ನಡೆಸಲೇಬೇಕಾದ ಅಗತ್ಯವಿತ್ತು. ಸೋಂಕಿಗೊಳಗಾಗಿದ್ದ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಯಿತು. ದೈನಂದಿನ ಔಷಧಿಗಳ ಜೊತೆಗೆ ಶಸ್ತ್ರಚಿಕಿತ್ಸೆ ನಡೆಸಿದ್ದು, ಸೋಂಕಿತರು ಶೀಘ್ರಗತಿಯಲ್ಲಿ ಗುಣಮುಖರಾಗಲು ಸಹಾಯ ಮಾಡಿತು. ಆಸ್ಪತ್ರೆಯಲ್ಲಿ ಒಟ್ಟು 18 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ ಕೆಲವರು ಕಳೆದ ನಾಲ್ಕು ವಾರಗಳಿಂದಲೂ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com