1.30 ಲಕ್ಷ ರೂ. ಬಾಕಿ ಹಣ ಪಾವತಿಗೆ ಖಾಸಗಿ ಆಸ್ಪತ್ರೆ ಒತ್ತಾಯ; ಮೃತದೇಹ ಪಡೆಯಲು ಒದ್ದಾಡಿದ ಬಡ ಕುಟುಂಬ

ಕೋವಿಡ್‌ನಿಂದ ನಿಧನರಾಗಿದ್ದ ರೋಗಿಯ ಮೃತದೇಹ ಒತ್ತೆ ಇಟ್ಟುಕೊಂಡು ರೂ.1.30 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಪಟ್ಟು ಹಿಡಿದಿದ್ದು, ಹಣ ಪಾವತಿ ಮಾಡಲಾಗದ ಬಡ ಕುಟುಂಬವೊಂದು ಒದ್ದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್‌ನಿಂದ ನಿಧನರಾಗಿದ್ದ ರೋಗಿಯ ಮೃತದೇಹ ಒತ್ತೆ ಇಟ್ಟುಕೊಂಡು ರೂ.1.30 ಲಕ್ಷ ಚಿಕಿತ್ಸಾ ಶುಲ್ಕ ಪಾವತಿಸುವಂತೆ ನಗರದ ಖಾಸಗಿ ಆಸ್ಪತ್ರೆಯೊಂದು ಪಟ್ಟು ಹಿಡಿದಿದ್ದು, ಹಣ ಪಾವತಿ ಮಾಡಲಾಗದ ಬಡ ಕುಟುಂಬವೊಂದು ಒದ್ದಾಡಿದ ಘಟನೆಯೊಂದು ಬೆಳಕಿಗೆ ಬಂದಿದೆ. 

ಮೇ.19 ರಂದು ನಾಗವಾರದ ಕುಪ್ಪುಸ್ವಾಮಿ ಲೇಔಟ್ ನಿವಾಸಿಯಾಗಿರುವ 70 ವರ್ಷದ ಮಖ್ಬೂಲ್ ಜಾನ್ ಎಂಬ ವೃದ್ಧೆಗೆ ಕೊರೋನಾ ಪಾಸಿಟಿವ್ ಬಂದಿತ್ತು. ಬಳಿಕ ಆವರನ್ನು ನಗರ ಭಗವಾನ್ ಮಹವೀರ್ ಜೈನ್ ಆಸ್ಪತ್ರೆಗೆ ಸರ್ಕಾರ ನೀಡಿರುವ ಮೀಸಲಾತಿ ಅಡಿಯಲ್ಲಿ ದಾಖಲು ಮಾಡಲಾಗಿತ್ತು. 

ಸಾಕಷ್ಟು ದಿನಗಳ ಕಾಲ ಚಿಕಿತ್ಸೆ ನೀಡಿದ ಬಳಿಕವು ವೃದ್ಧೆ ಚೇತರಿಸಿಕೊಳ್ಳಲಿಲ್ಲ. ಇದರಂತೆ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದರು. ಬಿಲ್ ಪಾವತಿ ಮಾಡದಿದ್ದರೂ ಮೃತದೇಹಗಳನ್ನು ಆಸ್ಪತ್ರೆ ಇಟ್ಟುಕೊಳ್ಳಬಾರದು ಎಂದು ಸರ್ಕಾರ ಸೂಚನೆ ನೀಡಿದ್ದರೂ ಕೂಡ, ಆಸ್ಪತ್ರೆ ಮೃತದೇಹವನ್ನು ಒತ್ತೆಯಾಗಿಟ್ಟುಕೊಂಡು ಬಿಲ್ ಪಾವತಿ ಮಾಡುವಂತೆ ತಿಳಿಸಿದೆ. 

ಒಟ್ಟಾರೆ ಬಿಲ್ ಮೊತ್ತ ರೂ.3,67,753 ಆಗಿದ್ದು, ಇತರೆ ಪರೀಕ್ಷೆ ಹಾಗೂ ರೋಗಿಗೆ ನೀಡಲಾಗಿರುವ ಕೆಲವು ಔಷಧಿಗಳು ಆಯುಷ್ಮಾನ್ ಭಾರತ್-ರಾಜ್ಯ ಆರೋಗ್ಯ ಯೋಜನೆಗಳ ಅಡಿಯಲ್ಲಿ ಬಾರದ ಹಿನ್ನೆಲೆಯಲ್ಲಿ ಇವುಗಳ ಬಿಲ್ ಮೊತ್ತ ರೂ.1,30,253 ಪಾವತಿ ಮಾಡುವಂತೆ ತಿಳಿಸಿದೆ. ಮೃತ ವೃದ್ಧೆಯ ಪುತ್ರ ವಿಕಲಚೇತನರಾಗಿದ್ದು, ನಿರುದ್ಯೋಗಿಯಾಗಿದ್ದಾರೆ. ಬಡ ಕುಟುಂಬವಾಗಿದ್ದು, ಬಿಲ್ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. 

ಬಳಿಕ ತುರ್ತು ಪ್ರತಿಕ್ರಿಯಾ ತಂಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಮಧ್ಯೆ ಪ್ರವೇಶಿಸಿ ನಂತರ 5 ಗಂಟೆಗಳ ಬಳಿಕ ಆಸ್ಪತ್ರೆಯವರು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. 

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಐಎಎಸ್ ಅಧಿಕಾರಿ ಮೊಹಮ್ಮದ್ ಮೊಹ್ಸಿನ್ ಅವರು, ಎಸ್ಎಎಸ್'ಸಿ ಮೀಸಲಾತಿ ಅಡಿಯಲ್ಲಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ಬ್ಯಾಕ್ಟಿರಿಯಾ ಸೋಂಕಿಗೆ ಆಸ್ಪತ್ರೆ ಚಿಕಿತ್ಸೆ ನೀಡಿದ್ದು, ಇದಕ್ಕೆ ಬಳಲಾಗಿರುವ ಕೆಲ ಔಷಧಿಗಳು ಸರ್ಕಾರದ ಮೀಸಲಾತಿ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ. ಸುದ್ದಿ ತಿಳಿದ ಬಳಿಕ ನಾವು ಮಧ್ಯಪ್ರವೇಶ ಮಾಡಿದ್ದೆವು. ಬಳಿಕ ಆಸ್ಪತ್ರೆ ಮೃತದೇಹ ಬಿಡುಗಡೆ ಮಾಡಿತ್ತು. ಬಿಲ್ ಪಾವತಿಯಾಗದಿದ್ದರೂ ಯಾವುದೇ ಆಸ್ಪತ್ರೆ ಮೃತದೇಹವನ್ನು ಒತ್ತೆಯಾಗಿಟ್ಟುಕೊಳ್ಳಬಾರದು. ಈ ಕುರಿತು ಬಿಬಿಎಂಪಿ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಶೀಘ್ರದಲ್ಲೇ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com