ಕೋವಿಡ್-19 ಎಫೆಕ್ಟ್: ಟೆಕ್ಕಿ, ವಿದ್ಯಾರ್ಥಿಗಳಿಗೆ ದೊಡ್ಡ ತಲೆ ನೋವಾಗಿರುವ ಇಂಟರ್ನೆಟ್ ಸಮಸ್ಯೆ!

ವರ್ಕ್ ಫ್ರಂ ಹೋಮ್ ಹಾಗೂ ಆನ್'ಲೈನ್ ತರಗತಿಗಳು ಉತ್ತಮ ಹೌದು. ಆದರೆ, ಪ್ರತಿಯೊಬ್ಬರಿಗೂ ಇದು ಉತ್ತಮವೆನಿಸುವುದಿಲ್ಲ. ಇದಕ್ಕೆ ಕಾರಣ ಇಂಟರ್ನೆಟ್ ಸಂಪರ್ಕ ಸೂಕ್ತ ರೀತಿಯಲ್ಲಿ ಸಿಗದಿರುವುದು.
ಗುಡಿಸಲಿನಲ್ಲಿ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಟೆಕ್ಕಿ ಸಿಂಧು
ಗುಡಿಸಲಿನಲ್ಲಿ ಲ್ಯಾಪ್ ಟಾಪ್ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಟೆಕ್ಕಿ ಸಿಂಧು

ಬೆಂಗಳೂರು: ವರ್ಕ್ ಫ್ರಂ ಹೋಮ್ ಹಾಗೂ ಆನ್'ಲೈನ್ ತರಗತಿಗಳು ಉತ್ತಮ ಹೌದು. ಆದರೆ, ಪ್ರತಿಯೊಬ್ಬರಿಗೂ ಇದು ಉತ್ತಮವೆನಿಸುವುದಿಲ್ಲ. ಇದಕ್ಕೆ ಕಾರಣ ಇಂಟರ್ನೆಟ್ ಸಂಪರ್ಕ ಸೂಕ್ತ ರೀತಿಯಲ್ಲಿ ಸಿಗದಿರುವುದು. ರಾಜ್ಯದ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳು ಇಂಟರ್ನೆಟ್ ಸಂಪರ್ಕಗಳು ಸೂಕ್ತವಾಗಿ ಸಿಗದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. 

ಶಿವಮೊಗ್ಗ ಜಿಲ್ಲೆಯ ಹೊಸನಗರದ ವರಂಬಾಳ್ಳಿಯ ನಿವಾಸಿಯಾಗಿರುವ ಟೆಕ್ಕಿ ಸಿಂಧು ಎನ್ ಎಂಬುವವರು ಮನೆಯಲ್ಲಿ ಎಂಟರ್ನೆಟ್ ಸಂಪರ್ಕ ಸಿಗದ ಕಾರಣ, ಲ್ಯಾಪ್'ಟಾಪ್, ಹಗುರ ಭಾರವಿರುವ ಚೇರ್ ಹಾಗೂ ಟೇಬಲ್ ಹೊತ್ತುಕೊಂಡು 1 ಕಿಮೀ ನಡೆದುಕೊಂಡು ಹೋಗಿ ಕೃಷಿ ಭೂಮಿಯೊಂದರಲ್ಲಿ ಟೆಂಟ್ ರೀತಿ ಹಾಕಿಕೊಂಡು ಪ್ರತೀನಿತ್ಯ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಬೇರೆಲ್ಲೂ ಇಂಟರ್ನೆಟ್ ಸಂಪರ್ಕ ಸಿಗುವುದಿಲ್ಲ. ಇದೊಂದೇ ಪ್ರದೇಶದಲ್ಲಿ ಸಿಗುತ್ತದೆ ಎಂದು ಸಿಂಧು ಅವರು ಹೇಳಿದ್ದಾರೆ. 

ಬೆಳಿಗ್ಗೆ 9.15ಕ್ಕೆ ಮನೆ ಬಿಟ್ಟು, 9.30ಕ್ಕೆ ಕೃಷಿ ಭೂಮಿ ತಲುಪುತ್ತೇನೆ. ವಾರದ 6 ದಿನಗಳ ಕಾಲ ಇದೇ ರೀತಿ ಮಾಡುತ್ತಿದ್ದೇನೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಕೊರೋನಾ ಮೊದಲನೇ ಅಲೆ ಆರಂಭವಾದ 2020 ಮಾರ್ಚ್ ತಿಂಗಳಿನಲ್ಲಿ ಗ್ರಾಮಕ್ಕೆ ಬಂದಿದ್ದೆ. 15 ತಿಂಗಳುಗಳಿಂದಲೂ ಇದೇ ರೀತಿ ಕಷ್ಟ ಅನುಭವಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಆರಂಭದಲ್ಲಿ ಹೊಸನಗರದಿಂದ 8 ಕಿಮೀ ದೂರದಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗುತ್ತಿದ್ದೆ. ನಂತರ 5 ಕಿಮೀ ದೂರದ ಗ್ರಾಮದಲ್ಲಿರುವ ಅಣ್ಣನ ಮನೆಗೆ ಹೋಗುತ್ತಿದ್ದೆ. ಲಾಕ್ಡೌನ್ 2 ಘೋಷಣೆಯಾದ ಬಳಿಕ ಎಲ್ಲಿಗೂ ಹೋಗದಂತಾಯಿತು ಎಂದು ತಿಳಿಸಿದ್ದಾರೆ. 

ಕೃಷಿ ಭೂಮಿಯಲ್ಲಿ ಓಡಾಡುತ್ತಿದ್ದ ಸಂದರ್ಭದಲ್ಲಿ ಮೊಬೈಲ್'ನಲ್ಲಿ ಸಿಗ್ನಲ್ ಬಂದಿತ್ತು. ನಂತರ ಇಲ್ಲಿಂದಲೇ ಕೆಲಸ ಮಾಡಬಹುದು ಎಂದು ಇಲ್ಲಿಯೇ ಟೆಂಟ್ ರೀತಿ ಹಾಕಿಕೊಂಡು ಕೆಲಸ ಮಾಡಲು ಆರಂಭಿಸಿದ್ದೆ. ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ಮತ್ತೊಂದು ಸಮಸ್ಯೆ ಎದುರಾಗಿದೆ. ನನ್ನ ಸಹೋದ್ಯೋಗಿಗಳು ಅತ್ಯಂತ ಸಹಕಾರ ನೀಡುತ್ತಿದ್ದಾರೆ. ಆದರೆ, ಪ್ರತೀಬಾರಿ ಇದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬಿಕಾಂ ಪದವೀಧರ ವಿನಾಯಕ್ ಪ್ರಭು ಎಂಬವವರು ಮಾತನಾಡಿ, 2017ರಲ್ಲಿಯೇ ಸಮಸ್ಯೆ ಕುರಿತು ಪ್ರಧಾನಮಂತ್ರಿಗಳ ಕಚೇರಿ ಹಾಗೂ ಮುಖ್ಯಮಂತ್ರಿಗಳ ಕಚೇರಿಕೆ ಪತ್ರ ಪಡೆದಿದ್ದೆ. ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ, ಪರಿಸ್ಥಿತಿ ಈಗಲೂ ಹಾಗೆಯೇ ಇದೆ. ಚಾಮರಾಜನಗರದ ಹನೂರ್ ತಾಲ್ಲೂಕಿನ ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಹಳ್ಳಿಗಳ ಜನರು ಕೂಡ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆಂದು ಹೇಳಿದ್ದಾರೆ. 

ಗ್ರಾಮದಲ್ಲಿ ನಮಗೆ 2ಜಿ ನೆಟ್'ವರ್ಕ್ ಮಾತ್ರ ಸಿಗುತ್ತಿದೆ. 3ಜಿ ನೆಟ್ ವರ್ಕ್ ಗಾಗಿ ನಾಲಾ ರಸ್ತೆಯವರೆಗೆ ಬೈಕ್ ನಲ್ಲಿ ಹೋಗಬೇಕು. ಅಲ್ಲಿಂದ ನಾವು ಕೆಲಸ ಮಾಡಬೇಕು. ಹೀಗಾಗಿ ಕೆಲವರು ಅಲ್ಲಿಯೂ ರೂಮ್ ನಲ್ಲಿದ್ದುಕೊಂಡು ಕೆಲಸ ಮಾಡಲು ಆರಂಭಿಸಿದ್ದಾರೆಂದು ಬಿಪಿಒ ನೌಕರ ರಾಜೇಂದ್ರ ಎಂಬುವವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com