ಬಿಪಿಎಲ್ ಕಾರ್ಡ್ ಹೊಂದಿರುವ ಕೋವಿಡ್ ನಿಂದ ಮೃತಪಟ್ಟ ವಯಸ್ಕರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ: ಸಿಎಂ ಯಡಿಯೂರಪ್ಪ

ಕೋವಿಡ್-19 ನಿಂದ ಕುಟುಂಬದ ವಯಸ್ಕ ಮೃತಪಟ್ಟು ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಬೆಂಗಳೂರು:ಕೋವಿಡ್-19 ನಿಂದ ಕುಟುಂಬದ ವಯಸ್ಕ ಮೃತಪಟ್ಟು ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೊರೋನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವಾಗಿ ಸರ್ಕಾರ 250ರಿಂದ 300 ಕೋಟಿ ರೂಪಾಯಿ ಪ್ಯಾಕೇಜ್ ನೀಡಲಿದೆ. ದೇಶದಲ್ಲಿಯೇ ಮೊದಲ ಬಾರಿಗೆ ನಮ್ಮ ಸರ್ಕಾರ ಈ ಪರಿಹಾರ ಘೋಷಣೆ ಮಾಡುತ್ತಿದೆ ಎಂದರು.

ಕೋವಿಡ್-19 ಸೋಂಕಿನಿಂದ ಮೃತಪಟ್ಟು ಹಲವಾರು ಕುಟುಂಬಗಳು ಇಂದು ಬೀದಿಪಾಲಾಗಿವೆ. ಹಲವು ಕುಟುಂಬಗಳ ಸ್ಥಿತಿ ಚಿಂತಾಜನಕವಾಗಿದೆ. ಇದನ್ನು ಮನಗಂಡಿರುವ ಸರ್ಕಾರ, ಒಂದು ಕುಟುಂಬದಲ್ಲಿನ ವಯಸ್ಕ ವ್ಯಕ್ತಿ, ದುಡಿಯುವ ಕೈ ಕೋವಿಡ್ ಸೋಂಕಿಗೆ ಮೃತಪಟ್ಟರೆ ಅಂತಹ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಆರ್ಥಿಕ ಸಹಾಯ ನೀಡಲಿದೆ. ಇದು ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ, ರಾಜ್ಯದಲ್ಲಿ 25ರಿಂದ 30 ಸಾವಿರ ಇಂತಹ ಕುಟುಂಬಗಳಿವೆ ಎಂದರು.

ದೇಶದಲ್ಲಿಯೇ ಕರ್ನಾಟಕ ಸರ್ಕಾರ ಈ ರೀತಿಯ ಕೋವಿಡ್-19 ಆರ್ಥಿಕ ಪ್ಯಾಕೇಜ್ ನೀಡುತ್ತಿದೆ ಎಂದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದರ್ಥ ಎಂದು ಮುಖ್ಯಮಂತ್ರಿ ಹೇಳಿದರು.

ಸಿಐಡಿ ತನಿಖೆಗೆ ತೀರ್ಮಾನ: ಮಂಡ್ಯ ಹಾಲು ಒಕ್ಕೂಟದಲ್ಲಿ ಹಾಲಿಗೆ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಸಿಐಡಿ ತನಿಖೆಗೆ ಒಪ್ಪಿಸಲಾಗುವುದು ಎಂದರು.

ಮಂಡ್ಯ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರನ್ನು ಹಿಂಪಡೆದು ಹೊಸ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ತಪ್ಪಿತಸ್ಥರು ಎಂದು ಕಂಡುಬಂದ ಐವರು ಅಧಿಕಾರಿಗಳನ್ನು ಅಮಾನತಿನಲ್ಲಿಡಲಾಗಿದೆ. ಒಕ್ಕೂಟದ ಮೇಲೆ ಕಲಂ 64ರ ಮೇಲೆ ವಿಚಾರಣೆ ಆರಂಭಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com