ದೂರವಾಣಿ ಕರೆ ಮಾರ್ಪಾಡು ಪ್ರಕರಣ; ಮತ್ತೆ 5 ಆರೋಪಿಗಳ ಬಂಧನ

ಅಂತರರಾಷ್ಟ್ರೀಯ ದೂರವಾಣಿ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡಿಸಿ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣದ ತನಿಖೆ ಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೆ ಐವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಂತರರಾಷ್ಟ್ರೀಯ ದೂರವಾಣಿ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡಿಸಿ ದೇಶದ ಭದ್ರತೆಗೆ ಧಕ್ಕೆಯುಂಟು ಮಾಡುವುದರ ಜೊತೆಗೆ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣದ ತನಿಖೆ ಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಮತ್ತೆ ಐವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಸೇನೆಯ ಗುಪ್ತಚರ ವಿಭಾಗ ನೀಡಿದ್ದ ಮಾಹಿತಿ ಆಧರಿಸಿ ತನಿಖೆ ಕೈಗೊಂಡಿದ್ದ ಸಿಸಿಬಿ ಭಯೋತ್ಪಾದನಾ ನಿಗ್ರಹ ವಿಭಾಗದ (ಎಟಿಸಿ) ಅಧಿಕಾರಿಗಳು, ಬಿಟಿಎಂ ಬಡಾವಣೆಯಲ್ಲಿ ವಾಸವಿದ್ದ ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಎಂಬುವರನ್ನು ಈ ಹಿಂದೆ ಬಂಧನಕ್ಕೊಳಪಡಿಸಿದ್ದರು. 

‘ಆರೋಪಿಗಳು ತಮ್ಮದೇ ಜಾಲ ರೂಪಿಸಿಕೊಂಡು ಕೃತ್ಯ ಎಸಗುತ್ತಿದ್ದರು. ಅವರು ನೀಡಿದ್ದ ಮಾಹಿತಿ ಆಧರಿಸಿ ತಮಿಳುನಾಡಿನ ಸಂತನ್ ಕುಮಾರ್ (29), ಸುರೇಶ್ ತಂಗವೇಲು (32), ಜೈ ಗಣೇಶ್ (30), ಕೇರಳದ ಮಹಮ್ಮದ್ ಬಷೀರ್ (51) ಹಾಗೂ ಅನೀಸ್ ಅತ್ತಿಮನ್ನೀಲ್ (30) ಎಂಬುವರನ್ನು ಇದೀಗ ಬಂಧನಕ್ಕೊಳಪಡಿಸಲಾಗಿದೆ. 

ಇವರಿಂದ 109 ಸಿಮ್ ಕಾರ್ಡ್‌ ಅಳವಡಿಸಿದ್ದ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್, 3,000 ಸಿಮ್ ಕಾರ್ಡ್, 23 ಲ್ಯಾಪ್‌ಟಾಪ್, 10 ಪೆನ್ ಡ್ರೈವ್ ಹಾಗೂ ಇತರೆ ಉಪಕರಣಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿದುಬಂದಿದೆ.

ಬಿಟಿಎಂ ಲೇಔಟ್, ಮಡಿವಾಳ ಹಾಗೂ ಸುದ್ದಗುಂಟೆಪಾಳ್ಯದಲ್ಲಿ ದಾಳಿ ನಡೆಸಲಾಗಿತ್ತು. ಇದರಂತೆ ಪ್ರಕರಣ ಸಂಬಂಧ ಮತ್ತೆ 5 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಗಳು ತಮ್ಮದೇ ಜಾಗದಲ್ಲಿ ಎಫ್‌ಸಿಟಿ ಬಾಕ್ಸ್ ಇಟ್ಟುಕೊಂಡು ಕೃತ್ಯ ಎಸಗುತ್ತಿದ್ದರು.

ಹಲವು ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ದೂರವಾಣಿ ಮಾರ್ಪಾಡು ಮಾಡುವ ಅಕ್ರಮ ಕೆಲಸಗಳನ್ನು ಮಾಡುತ್ತಿದ್ದರು. ಇದರಲ್ಲಿ 15 ಪ್ರದೇಶಗಳ ಮೇಲೆ ದಾಳಿ ನಡೆಸಲಾಗಿದೆ. ಆರೋಪಿ ಸಂತನ್ ಕುಮಾರ್, ಮೊಬೈಲ್ ಸೇವಾ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿಯಾಗಿದ್ದ. ಆತನೇ ತಮಿಳುನಾಡಿನ ಸುರೇಶ್ ತಂಗವೇಲು ಹಾಗೂ ಜೈಗಣೇಶ್ ಮೂಲಕ ಸಿಮ್‌ ಕಾರ್ಡ್‌ಗಳನ್ನು ಕೊರಿಯರ್ ಮೂಲಕ ಬೆಂಗಳೂರಿಗೆ ತರಿಸುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತರೆ ಆರೋಪಿಗಳ ಹುಡುಕಾಟ ಮುಂದುವರಿದಿದೆ. ಭಟ್ಕಳ ಮೂಲದ ವ್ಯಕ್ತಿಯೊಬ್ಬ ಹಣ ವರ್ಗಾವಣೆ ಮಾಡುತ್ತಿರುವ ವಿಚಾರ ತಿಳಿದುಬಂದಿದೆ. ಈ ಕುರಿತು ತನಿಖೆ ಚುರುಕುಗೊಂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com