ಬಜೆಟ್ ನಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಮೀಸಲಿಟ್ಟಿದ್ದು 168 ಕೋಟಿ ರೂ.; ಆದರೆ ಬಿಡುಗಡೆಯಾಗಿದ್ದು ಕೇವಲ 25 ಲಕ್ಷ ರೂ.!

ಬಜೆಟ್ ನಲ್ಲಿ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ 168 ಕೋಟಿ ರು, ಅನುದಾನ ಮೀಸಲಿಟ್ಟಿತ್ತು, ಆದರೆ ಕೇವಲ 25 ಲಕ್ಷ ರು ಮಾತ್ರ ಹಣ ಬಿಡುಗಡೆ  ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಸೇರಿದಂತೆ ರಾಜ್ಯ ಸರ್ಕಾರ ಸದ್ಯಕ್ಕೆ ಯಾವುದೇ ಚುನಾವಣೆ ನಡೆಸಲು ಉತ್ಸುಕವಾಗಿಲ್ಲ. ಬಜೆಟ್ ನಲ್ಲಿ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ 168 ಕೋಟಿ ರು, ಅನುದಾನ ಮೀಸಲಿಟ್ಟಿತ್ತು, ಆದರೆ ಕೇವಲ 25 ಲಕ್ಷ ರು ಮಾತ್ರ ಹಣ ಬಿಡುಗಡೆ  ಮಾಡಿದೆ.

ಕೋವಿಡ್ ಕೇಸ್ ಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ವರ್ಷದ ಅಂತ್ಯದವರೆಗೂ ಯಾವುದೇ ಚುನಾವಣೆ ನಡೆಸದಿರಲು ಸರ್ಕಾರ ತೀರ್ಮಾನಿಸಿದೆ, ಈ ಮೊದಲು ಈ ವರ್ಷದ ಮೇ ಮತ್ತು ಜೂನ್ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಡೆಸಲು ನಿರ್ಧರಿಸಿತ್ತು. ಆದರೆ ಕೆಲವು ವಾರಗಳ ಹಿಂದೆ ರಾಜ್ಯ ಸರ್ಕಾರ ಎಲ್ಲಾ ಚುನಾವಣೆಗಳನ್ನು ಮುಂದೂಡಿದೆ. ಈ ವರ್ಷಾಂತ್ಯದವರೆಗೂ ಚುನಾವಣೆ ನಡೆಯುವ ಸಾಧ್ಯತೆಯಿಲ್ಲ.

ರಾಜ್ಯದಲ್ಲಿ ಯಾವುದೇ ಸಮಯದಲ್ಲಿ ಚುನಾವಣೆಗಳಿಲ್ಲದ ಕಾರಣ, ಚುನಾವಣಾ ಆಯೋಗಕ್ಕೆ ಕೇವಲ 25 ಲಕ್ಷ ರೂ. ಹಣ ಬಿಡುಗಡೆ ಮಾಡಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಸರ್ಕಾರ ಸದ್ಯಕ್ಕೆ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಗಳು ತಿಳಿಸಿವೆ. 

ಈ ವರ್ಷ ನಡೆಯಬೇಕಾಗಿದ್ದ ಚುನಾವಣೆಯನ್ನು ರದ್ದು ಪಡಿಸಲು ಸರ್ಕಾರ ಉತ್ಸುಕವಾಗಿದೆ, ಹೀಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರು ಮುಂದುವರಿಯುವ ಸಾಧ್ಯತೆಯಿದೆ.

ಸದ್ಯ ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದೆ. ಆದರೆ  ಹಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ತೆರವಾಗಿಲ್ಲ, ಸುಮಾರು 10 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಅಧಿಕ ಸಂಖ್ಯೆಯಲ್ಲಿದೆ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ  ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಏಪ್ರಿಲ್ ನಲ್ಲಿ ಸೂಚಿಸಲಾಗಿತ್ತು.  ಅದರಲ್ಲಿ ಕೆಲವರು ಸಿದ್ಧತೆ ಆರಂಭಿಸಿದ್ದರು.  ಆದರೆ ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿತು ಎಂದು ರಾಜ್ಯ ಚುನಾವಣಾ ಆಯುಕ್ತ ಬಿ ಬಸವರಾಜು ತಿಳಿಸಿದ್ದಾರೆ. 

ಇನ್ನೂ ಅನುದಾನ ಕಡಿತಗೊಳಿಸಿರುವ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಸವರಾಜು, ಚುನಾವಣೆ ಘೋಷಣೆಯಾದ ನಂತರ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೇಳುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com