ಕಲಬುರಗಿ: ಅತ್ಯಾಚಾರ ಯತ್ನದಿಂದ ಪಾರಾಗಿದ್ದ ಕೋವಿಡ್ ಸೋಂಕಿತ ಮಹಿಳೆ ಸಾವು

ಆ್ಯಂಬುಲೆನ್ಸ್ ಚಾಲಕನ ಅತ್ಯಾಚಾರ ಯತ್ನದಿಂದ ಪಾರಾಗಿದ್ದ 20 ವರ್ಷದ ಕೊರೋನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಆ್ಯಂಬುಲೆನ್ಸ್ ಚಾಲಕನ ಅತ್ಯಾಚಾರ ಯತ್ನದಿಂದ ಪಾರಾಗಿದ್ದ 20 ವರ್ಷದ ಕೊರೋನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಕಲಬುರಗಿ ನಗರದ ನಿವಾಸಿಯಾಗಿದ್ದ ಮಹಿಳೆ ಕೋವಿಡ್ ಸೋಂಕಿನ ಕಾರಣ ಜೂನ್ 6ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಮರುದಿನವೇ ಅಂದರೆ ಜೂ.7-8ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈಕೆ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು.

ಖಾಸಗಿ ಆಂಬ್ಯುಲೆನ್ಸ್ ಚಾಲಕ, ಇಲ್ಲಿನ ಫಿಲ್ಟರ್ ಬೆಡ್ ನಿವಾಸಿ ಪಿಂಟು ಎಂಬುವವ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭದಲ್ಲಿ ಮಹಿಳೆ ಎಚ್ಚರಗೊಂಡು ಚೀರಿಕೊಂಡಾಗ ಆರೋಪಿ ಪರಾರಿಯಾಗಿದ್ದ. ಈ ಪ್ರಕರಣ ಸಂಬಂಧ ಈಗಾಗಲೇ ಆರೋಪಿಯನ್ನು ಬ್ರಹ್ಮಪುರ ಪೊಲೀಸರು‌ ಬಂಧಿಸಿದ್ದಾರೆ.

ಕೋವಿಡ್ ಸೋಂಕಿನ ಕಾರಣ ಮಹಿಳೆಯ ಶಾಸಕೋಶಗಳು ಸಾಕಷ್ಟು ಹಾನಿಯಾಗಿದ್ದವು. ಹೀಗಾಗಿ ವೆಂಟಿಲೇಟರ್ ನಲ್ಲಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆಂದು ಜಿಮ್ಸ್ ಆಸ್ಪತ್ರೆ ಹೇಳಿದೆ. 

ಅತ್ಯಾಚಾರ ಯತ್ನ ಆರೋಪ ಪ್ರಕರಣ ಇದ್ದರಿಂದ ಅಗತ್ಯ ವೈದ್ಯಕೀಯ ಪರೀಕ್ಷೆಗಳು ಮತ್ತು ಕೋವಿಡ್ ನಿಯಮಾವಳಿ ಪ್ರಕಾರ ಮರಣೋತ್ತರ ಪರೀಕ್ಷೆ ಕೂಡ ಮಾಡಲಾಗುವುದು ಎಂದು ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಘಟನೆ ಸಂಬಂಧ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಪ್ರಮುಖರಾದ ಕೆ.ನೀಲಾ, ಅಮೀನಾ ಬೇಗಂ, ಚಂದಮ್ಮ ಗೋಳಾ, ಜಗದೇವಿ ನೂಲಕರ್, ಶಹನಾಜ್ ಅಖ್ತರ್ ಸದರಿ ಘಟನೆ ಖಂಡಿಸಿ ಗುರುವಾರ ಜಿಮ್ಸ್ ಮುಂದೆ ಪ್ರತಿಭಟನೆ ನಡೆಸಿ, ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿಯು ಸಾವಿಗೀಡಾಗಿದ್ದಾಳೆ, ಭದ್ರತೆಯ ಲೋಪ ಈ ಪ್ರಕರಣದಿಂದ ದೃಢಪಟ್ಟಂತಾಗಿದೆ. ಆಡಳಿತ ಕ್ರಮ ಕೈಗೊಂಡಿದೆಯೇ? ಇಡೀ ಪ್ರಕರಣವನ್ನು ಉನ್ನತಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com