ರಾಜ್ಯದಲ್ಲಿ 'ರಕ್ಷಣಾ ತಂತ್ರಜ್ಞಾನ ಹಬ್‌' ಸ್ಥಾಪಿಸುವಂತೆ ರಕ್ಷಣಾ ಸಚಿವರಿಗೆ ಸಚಿವ ಶೆಟ್ಟರ್‌ ಪತ್ರ

ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವ ಮೂಲಕ ಏರೋಸ್ಪೇಸ್‌ ಮತ್ತು ರಕ್ಷಣಾ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರು ಗುರುವಾರ ಹೇಳಿದ್ದಾರೆ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ಗಳನ್ನು ಘೋಷಿಸುವ ಮೂಲಕ ಏರೋಸ್ಪೇಸ್‌ ಮತ್ತು ರಕ್ಷಣಾ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡುವಂತೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ಪತ್ರ ಬರೆಯಲಾಗಿದೆ’ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅವರು ಗುರುವಾರ ಹೇಳಿದ್ದಾರೆ.

ಏರೋಸ್ಪೇಸ್‌ ಮತ್ತು ಡಿಫೆನ್ಸ್‌ ರೌಂಡ್‌ ಟೇಬಲ್‌ ವೆಬಿನಾರ್‌ನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ದೇಶದಲ್ಲಿ ರಕ್ಷಣಾ ಹಾಗೂ ಏರೋಸ್ಪೇಸ್‌ಗೆ ಸಂಬಂಧಿಸಿದ ಕ್ಷೇತ್ರಗಳಿಗೆ ಹಲವಾರು ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿದೆ. ರಕ್ಷಣಾ ಉತ್ಪಾದನಾ ಕಾರಿಡಾರ್‌ ಯೋಜನೆಯ ಮೂಲಕ ಉತ್ತರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕ್ರಮವಾಗಿ 6 ಮತ್ತು 5 ನೋಡ್‌ಗಳನ್ನು ಉತ್ತೇಜಿಸುವ ಕಾರ್ಯಕ್ಕೆ ಮುಂದಾಗಿದೆ. ಹೊಸ ರಕ್ಷಣಾ ಕಾರಿಡಾರ್‌ಗಳನ್ನು ನಿರ್ಮಿಸುವುದರ ಜೊತೆಯಲ್ಲೇ, ಈಗಾಗಲೇ ಅಸ್ತಿತ್ವದಲ್ಲಿರುವ ಏರೋಸ್ಪೇಸ್‌ ಮತ್ತು ರಕ್ಷಣಾ ಉತ್ಪಾದನಾ ಪರಿಸರವನ್ನು ಹೊಂದಿರುವ ಪ್ರದೇಶಗಳಿಗೂ ಉತ್ತೇಜನ ನೀಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ಹೇಳಿದ್ದಾರೆ. 

ಕರ್ನಾಟಕ ರಾಜ್ಯದಲ್ಲಿ ರಕ್ಷಣಾ ತಂತ್ರಜ್ಞಾನ ಹಬ್‌ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುಕೂಲವಿದ್ದು, ಉತ್ತಮ ಪರಿಸರವಿದೆ. ರಾಜ್ಯದಲ್ಲಿ ಅತ್ಯುತ್ತಮ ಸಂಶೋಧನೆ ಮತ್ತು ಅಭಿವೃದ್ದಿಯ ಕೇಂದ್ರಗಳು ಇವೆ. ಅಲ್ಲದೆ, ಹೆಚ್‌ಎಎಲ್‌, ಬಿಇಎಲ್‌ನಂತಹ ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ಮತ್ತು ಡಿಆರ್‌ಡಿಓದ ಪ್ರಯೋಗಾಲಯಗಳಾದ ಡಿಏಆರ್‌ಇ ಮತ್ತು ಎಡಿಇಗಳಿವೆ. ಏರ್‌ಬಸ್‌, ಬೋಯಿಂಗ್‌, ಜಿಈ ಏವಿಯೇಷನ್‌ ನಂತಹ ಪ್ರಮುಖ ಕಂಪನಿಗಳು ರಾಜ್ಯದಲ್ಲಿವೆ. ಇದು ನಮ್ಮ ರಾಜ್ಯವನ್ನು ಏರೋಸ್ಪೇಸ್‌ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವಂತೆ ಮಾಡಿದೆ ಎಂದು ತಿಳಿಸಿದ್ದಾರೆ.

ದೇಶದ ಶೇಕಡಾ 25 ಕ್ಕೂ ಹೆಚ್ಚು ಏರ್‌ಕ್ರಾಫ್ಟ್‌ ಮತ್ತು ಸ್ಪೇಸ್‌ ಕ್ರಾಫ್ಟ್‌ ಕೈಗಾರಿಕೆಗಳು ರಾಜ್ಯದಲ್ಲಿವೆ. ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಶೇಕಡಾ 67 ರಷ್ಟು ಏರ್‌ ಕ್ರಾಫ್ಟ್‌ ಮತ್ತು ಹೆಲಿಕ್ಯಾಪ್ಟರ್‌ ಉತ್ಪಾದನೆ ರಾಜ್ಯದಲ್ಲಿ ನಡೆಯುತ್ತದೆ. ಅಲ್ಲದೆ, ಎಫ್‌ಡಿಐ ಇಂಟಲಿಜೆನ್ಸ್‌ನ ವಿಶ್ವ ಏರೋಸ್ಪೇಸ್‌ ನಗರಗಳ ಸೂಚ್ಯಂಕದ ಮೊದಲ 10 ನೇ ಸ್ಥಾನದಲ್ಲಿ ಬೆಂಗಳೂರು ನಗರ ಸ್ಥಾನ ಪಡೆದುಕೊಂಡಿದೆ.

ಹಾಗೆಯೇ, ಈ ಕ್ಷೇತ್ರಕ್ಕೆ ಬಿಡಿಭಾಗಗಳನ್ನು ಪೂರೈಸುವ 2000ಕ್ಕೂ ಹೆಚ್ಚು ಎಂಎಸ್‌ಎಂಇಗಳಿವೆ. ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದೇಶದಲ್ಲೇ ಮೊದಲು ಏರೋಸ್ಪೇಸ್‌ ಹಾಗೂ ಡಿಫೆನ್ಸ್‌ ಪಾಲಿಸಿಯನ್ನು ಜಾರಿಗೊಳಿಸಿದ ರಾಜ್ಯ ನಮ್ಮದಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com