ಕೊರೋನಾ 3ನೇ ಅಲೆ ಆತಂಕ: ಸರಗೂರಿನಲ್ಲಿ 12 ದಿನದಲ್ಲಿ ಕೋವಿಡ್ ಆರೈಕೆ ಕೇಂದ್ರ ನಿರ್ಮಾಣ
ಕೊರೋನಾ 3ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಜನರಿಗೆ ಸಹಾಯವಾಗುವ ಸಲುವಾಗಿ ಸರಗೂರು ಪಟ್ಟಣದಲ್ಲಿ 12 ದಿನಗಲ್ಲಿ ಕೋವಿಡ್ ಆರೈಕೆ ಕೇಂದ್ರ ನಿರ್ಮಾಣವಾಗಿದೆ.
Published: 19th June 2021 10:48 AM | Last Updated: 19th June 2021 01:20 PM | A+A A-

ಸಂಗ್ರಹ ಚಿತ್ರ
ಮೈಸೂರು: ಕೊರೋನಾ 3ನೇ ಅಲೆ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಬುಡಕಟ್ಟು ಜನರಿಗೆ ಸಹಾಯವಾಗುವ ಸಲುವಾಗಿ ಸರಗೂರು ಪಟ್ಟಣದಲ್ಲಿ 12 ದಿನಗಲ್ಲಿ ಕೋವಿಡ್ ಆರೈಕೆ ಕೇಂದ್ರ ನಿರ್ಮಾಣವಾಗಿದೆ.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ರೋಗಿಗಳ ಆರೈಕೆಗಾಗಿ ಪ್ರತ್ಯೇಕ ವಿಭಾಗ ಸ್ಥಾಪನೆಗೊಂಡಿದೆ. ಈ ಕೇಂದ್ರ ಭಾನುವಾರ ಉದ್ಘಾಟನೆಗೊಳ್ಳಲಿದೆ.
ಒಟ್ಟು 19 ಆಮ್ಲಜನಕ ಸೌಲಭ್ಯದ ಹಾಸಿಗೆ ಇರುವ ಈ ವಿಭಾಗದ ನಿರ್ಮಾಣ ಕಾರ್ಯ ಕೇವಲ 12 ದಿನಗಳಲ್ಲಿ ಪೂರ್ಣಗೊಂಡಿದೆ. ಸಾಂಪ್ರದಾಯಿಕ ನಿರ್ಮಾಣ ಕಾರ್ಯದ ಬದಲಿಗೆ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಮೊದಲೇ ನಿರ್ಮಿಸಿದ ಬಿಡಿಬಿಡಿ ಭಾಗಗಳನ್ನು ಇಲ್ಲಿ ಜೋಡಿಸುವ ಮೂಲಕ ಕಡಿಮೆ ಸಮಯದಲ್ಲಿ ಅತ್ಯುತ್ತಮ ವಿಭಾಗ ತಲೆ ಎತ್ತಿದೆ’ ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಲಾರ್ಸನ್ ಮತ್ತು ಟರ್ಬೊ ಟೆಕ್ನಾಲಜಿ ಸರ್ವೀಸಸ್ (ಎಲ್ ಅಂಡ್ ಟಿಟಿಎಸ್)ನ ಸಹಯೋಗದಲ್ಲಿ ಇನ್ನೋವ್ ಸಂಸ್ಥೆಯ ತಂತ್ರಜ್ಞಾನದ ನೆರವಿನಿಂದ ರೂ. 45 ಲಕ್ಷ ವೆಚ್ಚದಲ್ಲಿ ಈ ವಿಭಾಗವನ್ನು ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿದೆ. ಇದನ್ನು ಸಂಪೂರ್ಣ ಸರ್ಕಾರಿ ಕೋಟಾದಡಿಯ ಕೋವಿಡ್ ರೋಗಿಗಳಿಗೆ ಮೀಸಲಿರಿಸಲಾಗಿದೆ. ಮುಂದೆ 37 ಹಾಸಿಗೆಗಳು, 4 ತೀವ್ರ ನಿಗಾ ಘಟಕದ ಹಾಸಿಗೆಗಳು ಹಾಗೂ 200 ಲೀಟರ್ ಸಾಮರ್ಥ್ಯದ ಆಮ್ಲಜನಕದ ಟ್ಯಾಂಕ್‌ನ್ನು ನಿರ್ಮಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆ ಉದ್ದೇಶಕ್ಕಾಗಿ ಈ ಬಗೆಯ ನವೀನ ಕಟ್ಟಡದ ನಿರ್ಮಾಣ ಜಿಲ್ಲೆಯಲ್ಲಿಯೇ ಮೊದಲು ಎನಿಸಿದೆ. ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ವ್ಯವಸ್ಥೆಗಿಂತ ಇದು ಭಿನ್ನವಾಗಿದೆ. ಆಸ್ಪತ್ರೆಯಲ್ಲಿ ಇದುವರೆಗೂ 200ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ. ಹಾಲಿ ಇರುವ ಆಸ್ಪತ್ರೆಯಿಂದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಭಾಗವನ್ನು ಪ್ರತ್ಯೇಕಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.