ನಗರದಲ್ಲಿ ನೈಟ್, ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ: ಬಿಬಿಎಂಪಿ

ಜೂನ್ 21ರಿಂದ ಅನ್'ಲಾಕ್ 2.0 ಆರಂಭವಾಗಲಿದ್ದು, ಈ ಹಂತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶೇ.50ರಷ್ಟು ಪ್ರಯಾಣಿಕರೊಂದಿಗೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ ಎಂದು ಬಿಬಿಎಂಪಿ ತಿಳಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜೂನ್ 21ರಿಂದ ಅನ್'ಲಾಕ್ 2.0 ಆರಂಭವಾಗಲಿದ್ದು, ಈ ಹಂತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಶೇ.50ರಷ್ಟು ಪ್ರಯಾಣಿಕರೊಂದಿಗೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ನಡುವಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದೆ ಎಂದು ಬಿಬಿಎಂಪಿ ತಿಳಿಸಿದೆ. 

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಮೊದಲ ಹಂತದಲ್ಲಿ ಕೈಗಾರಿಕೆಗಳು ಮತ್ತು ಉತ್ಪಾದನಾ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಇದೀಗ ಜೂ.21ರಂದು ಎರಡನೇ ಹಂತದ ಲಾಕ್ಡೌನ್ ಸಡಿಲಿಕೆಯಾಗಲಿದ್ದು, ವಾಣಿಜ್ಯ ಉದ್ಯಮಗಳು ಮತ್ತು ಬಿಎಂಟಿಸಿ ಬಸ್ ಸಂಚಾರಕ್ಕೆ ಅವಕಾಶ ಸಿಗಲಿದೆ. ಕ್ರಮೇಣ ಪರಿಸ್ಥಿತಿ ಆಧರಿಸಿ ಉಳಿದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಕೊರೋನಾ 3ನೇ ಅಲೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಮಾಡಲಾದ ವಾರ್ ರೂಮ್ ಗಳು, ಆಸ್ಪತ್ರೆ, ಆಕ್ಸಿಜನ್, ಟ್ರಯಾಜಿಂಗ್ ಕೇಂದ್ರ, ಕೋವಿಡ್ ಆರೈಕೆ ಕೇಂದ್ರ. ವೈದ್ಯಕೀಯ ಸಿಬ್ಬಂದಿ ಸೇರಿದೆತೆ ವಿವಿಧ ವ್ಯವಸ್ಥೆಗಳು ಮುಂದುವರೆಯಲಿವೆ. ಮೂರನೇ ಅಲೆ ಸಲುವಾಗಿ ಕೆಲವು ಆಸ್ಪತ್ರೆಗಳಲ್ಲಿ ಮತ್ತಷ್ಟು ಐಸಿಯು ಹಾಸಿಗೆಗಳನ್ನು ನಿರ್ಮಿಸುವ ಸಿದ್ಧತೆಗಳು ನಡೆಯುತ್ತಿವೆ. ಕೆಲವು ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದಲ್ಲಿ ಐಸಿಯು ಹಾಸಿಗೆಗಳ ವ್ಯವಸ್ಥೆಗೆ ಮಾಡುವ ಕುರಿತು ಮಾತುಕತೆಗಳೂ ನಡೆಯುತ್ತಿವೆ ಎಂದು ಮಾಹಿತಿ ನೀಡಿದರು. 

ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಲಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಜನರು ಯಾರು ಅನಗತ್ಯವಾಗಿ ಓಡಾಡಬಾರದು. ಈ ಹಿಂದೆ ಇದ್ದಂತೆಯೇ ಈ ಕರ್ಫ್ಯೂ ಕೂಡ ಇರಲಿದೆ. ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಕರ್ಫ್ಯೂ ಮುಂದುವರೆಯಲಿದೆ. ಮೂರನೇ ಅಲೆ ಯಾವಾದ ಬರುತ್ತದೆಯೆಂದು ಈಗಾಗಲೇ ತಜ್ಞರು ಮುನ್ಸೂಚನೆ ಕೊಟ್ಟಿದ್ದಾರೆ. ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ, ಎಲ್ಲೆಂದರಲ್ಲಿ ಬೇಕಾಬಿಟ್ಟಿ ಓಡಾಡಿದರೆ ನಿರೀಕ್ಷೆಗಿಂತ ಮುಂಚಿತವಾಗಿಯೇ ಮೂರನೇ ಅಲೆ ಬರುವ ಸಾಧ್ಯತೆಗಳಿವೆ. ಆದ್ದರಿಂದ ಎಚ್ಚರಿಕೆ ಹಾಗೂ ಜವಾಬ್ದಾರಿಯನ್ನು ಅರಿತು ಸಾರ್ವಜನಿಕರು ನಡೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com