ಧಾರವಾಡ ಜಿಲ್ಲೆ ಅನಲಾಕ್ ಮಾಡುವಂತೆ ಜಗದೀಶ್ ಶೆಟ್ಟರ್ ಮನವಿ: ಸರ್ಕಾರದಿಂದ ಪರಿಷ್ಕೃತ ಆದೇಶ

10 ದಿನಗಳ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.4.5 ರಷ್ಟಿದ್ದ ಕಾರಣ ಅನ್‌ಲಾಕ್‌ ಜಿಲ್ಲೆಗಳ ಪಟ್ಟಿಗೆ ಢಾರವಾಡವನ್ನೂ ಸೇರಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ರಾಜ್ಯ ಸರ್ಕಾರ ಕೋವಿಡ್ ಅನ್‌ಲಾಕ್ ಕುರಿತು ಹೊರಡಿಸಿದ ಆದೇಶದಲ್ಲಿ ಧಾರವಾಡ ಜಿಲ್ಲೆ ಬಿಟ್ಟು ಹೋಗಿತ್ತು. ಜಿಲ್ಲೆಯಲ್ಲಿ 10 ದಿನಗಳ ಕೋವಿಡ್ ಪಾಸಿಟಿವಿಟಿ ಸರಾಸರಿ ದರ ಶೇ.4.5 ರಷ್ಟಿದ್ದ ಕಾರಣ ಅನ್‌ಲಾಕ್‌ ಜಿಲ್ಲೆಗಳ ಪಟ್ಟಿಗೆ ಢಾರವಾಡವನ್ನೂ ಸೇರಿಸಿ ಪರಿಷ್ಕೃತ ಆದೇಶ ಹೊರಡಿಸಲಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರು ಈ ಕುರಿತು ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಸರ್ಕಾರದ ಕಾರ್ಯದರ್ಶಿಯೊಂದಿಗೆ ಚರ್ಚಿಸಿದ್ದು, ಧಾರವಾಡ ಜಿಲ್ಲೆಗೂ ಅನ್‌ಲಾಕ್ ಆದೇಶ ವಿಸ್ತರಿಸಿ ಸರ್ಕಾರದಿಂದ ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಈ ಬೆನ್ನಲ್ಲೇ ಪರಿಷ್ಕೃತ ಆದೇಶ ಬಂದಿದೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಸಿ.ಎಂ.ಆರ್ ವರದಿಯಲ್ಲಿ ಜಿಲ್ಲೆಯ ಪಾಸಿಟಿವಿಟಿ ದರ ಶೇ.5 ಕ್ಕಿಂತಲೂ ಕಡಿಮೆಯಿದೆ. ಆದರೆ ಸ್ಟೇಟ್ ವಾರ್ ರೂಮ್‌ನಿಂದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜರುಗಿದ ಸಭೆಗೆ ಧಾರವಾಡ ಜಿಲ್ಲೆಯ ಪಾಸಿಟಿವಿ ದರ ಶೇ.5.7 ರಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ. ಹಾಗಾಗಿ ಅನ್‌ಲಾಕ್ ಆದೇಶದಲ್ಲಿ ಜಿಲ್ಲೆಯ ಹೆಸರು ಕೈಬಿಟ್ಟಿತ್ತು ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಜನರು ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ್ದಾರೆ. ಹುಬ್ಬಳ್ಳಿ ವ್ಯಾಪಾರ ವಹಿವಾಟಿಗೆ ಹೆಸರಾಗಿದೆ. ಅಕ್ಕಪಕ್ಕದ ಜಿಲ್ಲೆಗಳ ಹಾಗೆ ಧಾರವಾಡ ಜಿಲ್ಲೆಯನ್ನು ಸಹ ಸ್ವಾಭಾವಿಕವಾಗಿ ಅನ್‌ಲಾಕ್ ಮಾಡಬೇಕು. ಸರ್ಕಾರ ಹೊರಡಿಸಿದ ಅನ್‌ಲಾಕ್ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಿಲ್ಲೆಯಲ್ಲಿ ಪಾಲಿಸಲಾಗುವುದು. ಈ ಬಾರಿ ಅನ್‌ಲಾಕ್ ಮಾರ್ಗಸೂಚಿಯಲ್ಲಿ ವ್ಯಾಪಾರ ವಹಿವಾಟಿಗಳಿಗೆ ಸಮಯ ಹೆಚ್ಚಿಸಲಾಗಿದೆ. ಬಿ.ಆರ್.ಟಿ.ಎಸ್ ಸೇರಿದಂತೆ ಅಂತರ್ ಜಿಲ್ಲಾ ಬಸ್ ಓಡಾಟ ಪ್ರಾರಂಭವಾಗವುದು. ಅಂತರಾಜ್ಯ ಬಸ್ ಓಡಾಟಗಳ ಬಗ್ಗೆ ರಾಜ್ಯ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com