ಕರ್ನಾಟಕ ಅನ್ ಲಾಕ್ 2.0: ಕೆಎಸ್ ಆರ್ ಟಿಸಿ, ಬಿಎಂಟಿಸಿ, ಮೆಟ್ರೊ ಸಂಚಾರ ಆರಂಭ; ಹೋಟೆಲ್, ಜಿಮ್ ಗಳು ಓಪನ್!

ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ಎರಡು ತಿಂಗಳ ನಂತರ ಸೋಮವಾರ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬರುತ್ತಿದೆ. 54 ದಿನಗಳ ನಂತರ ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.
ರಾಜ್ಯದಲ್ಲಿ ಇಂದು ಬಸ್ ಮತ್ತು ಮೆಟ್ರೊ ಸಂಚಾರ ಆರಂಭ ಹಿನ್ನೆಲೆ ಕಂಡುಬಂದ ದೃಶ್ಯ
ರಾಜ್ಯದಲ್ಲಿ ಇಂದು ಬಸ್ ಮತ್ತು ಮೆಟ್ರೊ ಸಂಚಾರ ಆರಂಭ ಹಿನ್ನೆಲೆ ಕಂಡುಬಂದ ದೃಶ್ಯ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸುಮಾರು ಎರಡು ತಿಂಗಳ ನಂತರ ಸೋಮವಾರ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬರುತ್ತಿದೆ. 54 ದಿನಗಳ ನಂತರ ಬೆಂಗಳೂರಿನಲ್ಲಿ ಮೆಟ್ರೊ ಮತ್ತು ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ.

ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬೇರೆ ಬಹುತೇಕ ಜಿಲ್ಲೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ಬಸ್ ಗಳು ರಸ್ತೆಗಿಳಿದಿಲ್ಲ. ಬಸ್ ಗಳ ಸಂಖ್ಯೆ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಸಹ ಬಾರದಿರುವುದರಿಂದ ಸಂಚಾರಕ್ಕೆ ಬಸ್ ಇದೆ ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಕಾದು ಕಾದು ಕಂಗಾಲಾಗಿದ್ದಾರೆ.

ಬಸ್ ಗಳ ಸಂಖ್ಯೆ ವಿರಳವಾಗಿರುವುದರಿಂದ ಬಂದ ಬಸ್ ಗಳಲ್ಲಿ ಹತ್ತಲು ಜನರ ನೂಕುನುಗ್ಗಲು ಬೆಂಗಳೂರಿನಲ್ಲಿ ಬೆಳಗ್ಗೆ ಕಂಡುಬಂತು. ಪೊಲೀಸರೊಂದಿಗೆ ಪ್ರಯಾಣಿಕರು ವಾಗ್ವಾದ ನಡೆಸುತ್ತಿದ್ದಾರೆ. ಎರಡು ಡೋಸ್ ಪಡೆದ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗಬೇಕು, ಶೇಕಡಾ 50ರಷ್ಟು ಮಾತ್ರ ಸೀಟು ಭರ್ತಿ ಮಾಡಿಕೊಂಡು ಹೋಗಬೇಕೆಂಬ ಸರ್ಕಾರದ ಕೋವಿಡ್ ನಿಯಮ ಪ್ರಯಾಣಿಕರಿಗೆ, ಸಾರಿಗೆ ಇಲಾಖೆ ಸಿಬ್ಬಂದಿಗೆ ಸಂಕಷ್ಟು ತಂದೊಡ್ಡಿದೆ.

ಹೊಟೇಲ್ ಗಳಲ್ಲಿ ಸೇವೆಗಳು ಆರಂಭವಾಗಿದೆ. ಜಿಮ್ ಗಳು ಕೂಡ ಸಾರ್ವಜನಿಕರಿಗೆ ಮುಕ್ತವಾಗಿವೆ. ಕರ್ನಾಟಕ ಅನ್ ಲಾಕ್ -2 ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಜುಲೈ 5ರವರೆಗೆ ಜಾರಿಯಲ್ಲಿರುತ್ತದೆ. ಕೋವಿಡ್ -19 ಪಾಸಿಟಿವ್ ದರ ಶೇಕಡಾ 5 ಕ್ಕಿಂತ ಕಡಿಮೆ ಇರುವ 17 ಜಿಲ್ಲೆಗಳಲ್ಲಿ ಇಂದಿನಿಂದ ಬೆಳಿಗ್ಗೆ 6 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ ಮತ್ತು ಬಸ್ ಮತ್ತು ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ 50 ಶೇಕಡಾ ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಹವಾನಿಯಂತ್ರಣವಿಲ್ಲದ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ರೆಸ್ಟೋರೆಂಟ್‌ಗಳು ಸಂಜೆ 5 ಗಂಟೆಯವರೆಗೆ 50 ಪ್ರತಿಶತದಷ್ಟು ಆಸನಗಳೊಂದಿಗೆ ಸೇವೆಗೆ ತೆರೆದಿರುತ್ತವೆ, ಆದರೆ ಮದ್ಯಸೇವನೆಗೆ ಅನುಮತಿಯನ್ನು ಇನ್ನೂ ಸರ್ಕಾರ ನೀಡಿಲ್ಲ. ಅಲ್ಲದೆ, ಜಿಮ್‌ಗಳು ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ, ಉದ್ಯಾನವನಗಳು ಬೆಳಿಗ್ಗೆ 5 ರಿಂದ ಸಂಜೆ 6 ರವರೆಗೆ ವಾಕಿಂಗ್ ಮತ್ತು ಜಾಗಿಂಗ್‌ಗಾಗಿ ತೆರೆದಿರುತ್ತವೆ.

ಶೇಕಡಾ 50ರಷ್ಟು ಬುಕಿಂಗ್ ಹೊಂದಿರುವ ವಸತಿಗೃಹಗಳು ಮತ್ತು ರೆಸಾರ್ಟ್‌ಗಳ ಕಾರ್ಯ, ಪ್ರೇಕ್ಷಕರಿಲ್ಲದೆ ಹೊರಾಂಗಣ ಕ್ರೀಡಾ ಚಟುವಟಿಕೆಗಳು, ಹೊರಾಂಗಣ ಚಲನಚಿತ್ರ ಶೂಟಿಂಗ್ ಗೆ ಅನುಮತಿ ನೀಡಲಾಗಿದೆ. 

ಲಾಕ್ ಡೌನ್ ಇಂದು ಸಡಿಲಿಕೆಯಾಗುತ್ತಿದ್ದಂತೆ ಮೊದಲ ದಿನವೇ ಜನರು ಬಸ್ ಗಾಗಿ ಮುಗಿಬಿದ್ದ ಘಟನೆಗಳೂ ವರದಿಯಾಗಿವೆ. ಇಂದು 2 ಸಾವಿರ ಬಸ್ಸುಗಳು ರಸ್ತೆಗಿಳಿಯಲಿವೆ ಎಂದು ಬಿಎಂಟಿಸಿ ಹೇಳಿದ್ದರೂ ಬೆರಳೆಣಿಕೆಯಲ್ಲಿ ಬಸ್ಸುಗಳು ಸಂಚಾರ ನಡೆಸಿರುವುದೇ ಗೊಂದಲಕ್ಕೆ ಕಾರಣವಾಗಿದೆ. 

ಕೆಎಸ್ ಆರ್ ಟಿಸಿ ಬಸ್ ಸಂಚಾರ: ಮೈಸೂರು, ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಬೇರೆಲ್ಲಾ ಕಡೆಗಳಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಚಿಕ್ಕಮಗಳೂರು, ನೆಲಮಂಗಲ ಸೇರಿದಂತೆ ಕೆಲವೆಡೆ ಬಸ್ ನಿಲ್ದಾಣಗಳಿಗೆ ಬಸ್ ಬರದೆ ಜನರಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಕೆಲವು ಕಡೆಗಳಲ್ಲಿ ಜನರು ದೈಹಿಕ ಅಂತಹ ಮರೆತು ಕೊರೋನಾ ನಿಯಮಗಳನ್ನು ಗಾಳಿಗೆ ತೂರಿರುವುದು ವರದಿಯಾಗಿದೆ.

ಬಹುತೇಕ ಕಡೆ ಬಸ್ ಗಳ ಸಂಚಾರ ಸಾಕಷ್ಟು ಇಲ್ಲದಿರುವುದರಿಂದ ಆಸ್ಪತ್ರೆಗೆ, ಕಚೇರಿಗಳಿಗೆ,ಅಗತ್ಯ ಕೆಲಸಗಳಿಗೆ ಹೋಗುತ್ತಿರುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. 

ಮೆಟ್ರೊ ರೈಲು ಸಂಚಾರ: 54 ದಿನಗಳ ನಂತರ ಇಂದು ಮೆಟ್ರೊ ರೈಲು ಬೆಂಗಳೂರಿನಲ್ಲಿ ಸಂಚಾರ ಆರಂಭಿಸಿದೆ. ಬೆಳಗ್ಗೆ 7ಗಂಟೆಯಿಂದ 11 ಗಂಟೆಯವರೆಗೆ ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯವರೆಗೆ ಪ್ರತಿ 5 ನಿಮಿಷಗಳಿಗೊಮ್ಮೆ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೊ ಸಂಚಾರ ಆರಂಭಿಸಲಿವೆ. ಆದರೆ ಸ್ಮಾರ್ಟ್ ಕಾರ್ಡು ಇದ್ದವರಿಗೆ ಮಾತ್ರ ಮೆಟ್ರೊ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು ನಿಲ್ದಾಣಗಳಲ್ಲಿ ರೀಚಾರ್ಜ್ ಮಾಡಿಕೊಂಡು ಪ್ರಯಾಣಿಸಬಹುದಾಗಿದೆ. 

ಇಂದು ಬೆಳಗ್ಗೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಿಂದ ವರದಿ ಮಾಡಿದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಲಲತಾ, ಜನರು ಮೆಟ್ರೊದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಶಾಂತಚಿತ್ತದಿಂದ ಪ್ರಯಾಣಿಸುತ್ತಿರುವುದು ಕಂಡುಬಂತು. ಮೆಟ್ರೊ ನಿಲ್ದಾಣದಲ್ಲಿ ದೇಹದ ಉಷ್ಣಾಂಶ ತಪಾಸಣೆ ಕಡ್ಡಾಯವಾಗಿದ್ದು, ಹ್ಯಾಂಜ್ ಸ್ಯಾನಿಟೈಸರ್ ಮಾಡಿಕೊಳ್ಳಬೇಕಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹಳದಿ ಬಣ್ಣದ ಪಟ್ಟಿಯಲ್ಲಿ ಮಾತ್ರ ಕುಳಿತು ಅಥವಾ ನಿಂತು ಪ್ರಯಾಣಿಸಬೇಕಾಗಿದ್ದು, ವಾರಾಂತ್ಯದ ಕರ್ಫ್ಯೂ ಇರುವುದರಿಂದ ಶನಿವಾರ, ಭಾನುವಾರ ಪ್ರಯಾಣ ಇರುವುದಿಲ್ಲ ಎಂದು ವರದಿ ಮಾಡಿದ್ದಾರೆ. 

ರಾಜ್ಯ ಸರ್ಕಾರದ ಅನ್ ಲಾಕ್ 2.0 ಬೆಂಗಳೂರು ನಗರ, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಗದಗ, ಧಾರವಾಡ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಿಗೆ ಅನ್ವಯವಾಗುತ್ತದೆ. ಶೇಕಡಾ 5 ಕ್ಕಿಂತ ಹೆಚ್ಚು ಸಕಾರಾತ್ಮಕ ಕೊರೋನಾ ಸೋಂಕು ಹೊಂದಿರುವ ಉಳಿದ ಜಿಲ್ಲೆಗಳಲ್ಲಿ ಮೊನ್ನೆ ಜೂನ್ 11 ರಿಂದ ಜಾರಿಯಲ್ಲಿರುವ ಲಾಕ್ ಅನ್ವಯವಾಗಲಿದ್ದು, ಅಗತ್ಯ ಅಂಗಡಿಗಳನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಪಾಸಿಟಿವ್ ಪ್ರಕರಣ ಹೆಚ್ಚಿರುವ ಮೈಸೂರು ಜಿಲ್ಲೆಯಲ್ಲಿ ಜುಲೈ 5 ರವರೆಗೆ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com