ಕೊರೋನಾ 3ನೇ ಅಲೆಗೆ ಸಿದ್ಧತೆ: ಮಕ್ಕಳಿಗಾಗಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸಲು ಸರ್ಕಾರ ಚಿಂತನೆ

ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಶುರುವಾಗಿದ್ದು, ಹೀಗಾಗಿ ಮಕ್ಕಳಿಗಾಗಿಯೇ ನಗರದಲ್ಲಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸಲಹೆಗಳು ಬಂದಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸೋಮವಾರ ಹೇಳಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ 3ನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಆತಂಕ ಶುರುವಾಗಿದ್ದು, ಹೀಗಾಗಿ ಮಕ್ಕಳಿಗಾಗಿಯೇ ನಗರದಲ್ಲಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ ನಿರ್ಮಿಸುವಂತೆ ಸಲಹೆಗಳು ಬಂದಿದ್ದು, ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಮುಖ್ಯಮಂತ್ರಿಗಳನ್ನು ಶೀಘ್ರದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಮುಖ್ಯಮಂತ್ರಿಗಳ ಅಂತಿಮ ಆದೇಶದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮುದಾಯ ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಸ್ಥಳೀಯ ಶಾಲೆಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಮಕ್ಕಳನ್ನು ನೋಡಿಕೊಳ್ಳಲು ತಾಯಿಯಂದಿರಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ. 

ಮಕ್ಕಳಿಗಾಗಿಯೇ ರಾಜ್ಯದ ವಿವಿಧೆಡೆ 1419 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 141 ವೆಂಟಿಲೇಟರ್ ಬೆಡ್, 116 ವೆಂಟಿಲೇಟರ್ ರಹಿತ ಐಸಿಯು ಬೆಡ್, 430 ಎಚ್‍ಡಿಯು ಹಾಸಿಗೆ ಹಾಗೂ 712 ಸಾಮಾನ್ಯ ಹಾಸಿಗೆಗಳಾಗಿವೆ ಎಂದು ಅಂಕಿ ಸಮೇತ ವಿವರ ನೀಡಿದರು.

ಕಳೆದ ಒಂದು ವರ್ಷದ ಅವಯಲ್ಲಿ 1 ಮತ್ತು 2ನೇ ಅಲೆಯ ವೇಳೆ ಕೋವಿಡ್ ಸೋಂಕಿನಿಂದ 51 ಮಕ್ಕಳು ಮೃತಪಟ್ಟಿದ್ದಾರೆ. 67,687 ಒಂಭತ್ತು ವರ್ಷದೊಳಗಿನ ಮಕ್ಕಳು ಹಾಗೂ 1,70,565 ಒಂಭತ್ತರಿಂದ 18 ದೊಳಗಿನವರು. ಒಟ್ಟು 2,38,257 ಮಕ್ಕಳಿಗೆ ಸೋಂಕು ತಗುಲಿತ್ತು. ಒಂದು ಮತ್ತು 2ನೇ ಅಲೆಯಲ್ಲಿ 50 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿದ್ದಾರೆ. ಅನಾಥ ಮಕ್ಕಳಿಗೆ ಮುಖ್ಯಮಂತ್ರಿ ಬಾಲ ಸೇವಾ ಯೋಜನೆ ಮೂಲಕ ಸಹಾಯಧನ ನೀಡಲಾಗುವುದು. ಈ ಯೋಜನೆಯಲ್ಲಿ ಪ್ರತೀ ತಿಂಗಳು ತಲಾ ರೂ.3,500 ನೀಡಲಾಗುವುದು. ಜೊತೆಗೆ ಉಚಿತ ಶಿಕ್ಷಣ ನೀಡಲಾಗುವುದು. 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ ರೂ.1 ಲಕ್ಷ ನೀಡಲು ತೀರ್ಮಾನಿಸಲಾಗಿದೆ. ಮಕ್ಕಳನ್ನು ನೋಡಿಕೊಳ್ಳಲು ಸಂಬಂಧಿಗಳು ಶಕ್ತರಿಲ್ಲದಿದ್ದರೆ ಇಲಾಖೆ ಮೂಲಕ ದತ್ತು ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಯಾರಾದರೂ ದಾನಿಗಳು ಅವರ ಜೀವನ ಭವಿಷ್ಯ ರೂಪಿಸಲು ಮುಂದೆ ಬಂದರೆ ಇಲಾಖೆ ಕೊಂಡಿಯಾಗಿ ಕೆಲಸ ಮಾಡಲಿದೆ’ ಎಂದೂ ತಿಳಿಸಿದರು.

ಜಿಲ್ಲೆಗಳಲ್ಲಿ ಒಟ್ಟು 22,871 ಗರ್ಭಿಣಿಯರು, 19,131 ಬಾಣಂತಿಯರು, 97 ಕಿಶೋರಿಯರು ಇದ್ದಾರೆ. 124 ಮಕ್ಕಳು ತೀವ್ರ ಅಪೌಷ್ಡಿಕತೆ, 9,761 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 39 ಪೋಕ್ಸೊ ಪ್ರಕರಣಗಳು ನಡೆದಿದ್ದು, 37 ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. ಕಳೆದೊಂದು ವರ್ಷದಲ್ಲಿ 168 ಬಾಲ್ಯವಿವಾಹದ ದೂರುಗಳು ಬಂದಿವೆ. 122 ಬಾಲ್ಯ ವಿವಾಹ ತಡೆಯಲಾಗಿದೆ. 28 ಬಾಲ್ಯ ವಿವಾಹ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ, ಏಪ್ರಿಲ್‌ನಿಂದ ಇಲ್ಲಿಯವರೆಗೆ ಮೂರು ಬಾಲ್ಯ ವಿವಾಹದ ದೂರುಗಳು ಬಂದಿದ್ದು, ಎರಡು ಬಾಲ್ಯ ವಿವಾಹ ತಡೆಹಿಡಿಯಲಾಗಿದೆ. ಒಂದು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಹೊರಗಡೆಯಿಂದ ಬೆಂಗಳೂರಿಗೆ ವಲಸೆ ಬಂದಿರುವ 513 ಮಕ್ಕಳಿಗೆ ಆಹಾರ ವಿತರಿಸಲಾಗಿದೆ’ ಎಂದು ಸಚಿವರು ವಿವರಿಸಿದರು.

ಇದೇ ವೇಳೆ ಮಕ್ಕಳ ಲಸಿಕೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಅದು ಯಶಸ್ವಿಯಾದರೆ ಮುಂದಿನ ತೀರ್ಮಾನ ಪ್ರಧಾನಿ, ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆ. ಶಾಲೆ ತೆರೆಯುವ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚಿಸಲಾಗುವುದು. ತಜ್ಞರ ವರದಿಯಲ್ಲಿ ಏನು ಹೇಳಿದ್ದಾರೆ ಎಂಬ ಮಾಹಿತಿ ಇಲ್ಲ’ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com