2ನೇ ಹೆಂಡತಿ ಮಾತು ಕೇಳಿ ಸ್ವಂತ ಮಕ್ಕಳ ಮೇಲೆ 'ಪೈಶಾಚಿಕ ಹಲ್ಲೆ' ಮಾಡಿದ್ದ 'ಪಾಪಿ ತಂದೆ' ಬಂಧನ

ಮಕ್ಕಳು ಹಠ ಮಾಡುತ್ತಾರೆ ಎಂಬ 2ನೇ ಹೆಂಡತಿಯ ಮಾತುಗಳನ್ನು ಕೇಳಿ ತನ್ನದೇ ಸ್ವಂತ ಮಕ್ಕಳ ಮೇಲೆ 'ಪೈಶಾಚಿಕ ಹಲ್ಲೆ' ಮಾಡಿದ್ದ 'ಪಾಪಿ ತಂದೆ'ಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಕ್ಕಳು ಹಠ ಮಾಡುತ್ತಾರೆ ಎಂಬ 2ನೇ ಹೆಂಡತಿಯ ಮಾತುಗಳನ್ನು ಕೇಳಿ ತನ್ನದೇ ಸ್ವಂತ ಮಕ್ಕಳ ಮೇಲೆ 'ಪೈಶಾಚಿಕ ಹಲ್ಲೆ' ಮಾಡಿದ್ದ 'ಪಾಪಿ ತಂದೆ'ಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಬೆಂಗಳೂರಿನ ಜೆ.ಪಿ.ನಗರದಲ್ಲಿ ಈ ಘಟನೆ ನಡೆದಿದ್ದು, 2ನೇ ಪತ್ನಿಯ ಮಾತು ಕೇಳಿ ತನ್ನ ಮೂರು ಪುಟ್ಟ ಮಕ್ಕಳ ಮೇಲೆ ತಂದೆ ಪೈಶಾಚಿಕವಾಗಿ ಹಲ್ಲೆ ಮಾಡಿದ್ದಾನೆ. ಮಕ್ಕಳು ಮಾತುಕೇಳುತ್ತಿಲ್ಲ ಎಂಬ 2ನೇ ಪತ್ನಿ ಮಾತು ಕೇಳಿ ದೋಸೆ ಎತ್ತುವ ಮೊಗಚೆ ಕೈಯನ್ನು ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಬರೆ ಎಳೆದಿದ್ದಾನೆ.  ಅಲ್ಲದೆ ಮಕ್ಕಳ ಭುಜದ ಮೇಲೆ ಚುಚ್ಚಿ ಗಾಯ ಮಾಡಲಾಗಿದ್ದು, ಯಾರಿಗಾದರೂ ಹೇಳಿದರೆ ಮತ್ತೆ ಬರೆ ಎಳೆಯುತ್ತೇನೆ ಎಂದು ಬೆದರಿಸಿದ್ದಾನೆ. ನೋವು ತಾಳಲಾರದೆ ಮನೆಯಿಂದ ಮಕ್ಕಳು ಓಡಿ ಬಂದಿದ್ದು, ಇದನ್ನು ಗಮನಿಸಿದ ಸ್ಥಳೀಯರು ತಂದೆ ಮತ್ತು ಮಲತಾಯಿಯನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಮೂವರು  ಮಕ್ಕಳ ನೆರವಿಗೆ ಧಾವಿಸಿದ್ದಾರೆ.

ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ತಂದೆ ಸೆಲ್ವಾ ಮತ್ತು ಮಲತಾಯಿ ಸತ್ಯಾಳನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಘಟನೆ?
ಆರೋಪಿ ಸೆಲ್ವಾ ಕ್ರೂಸರ್ ಡ್ರೈವರ್ ಆಗಿದ್ದು ಮೂರು ತಿಂಗಳ ಹಿಂದಷ್ಟೇ ಸೆಲ್ವಾನ ಮೊದಲ ಪತ್ನಿ ಅಂಜಲಿ ಮೃತಪಟ್ಟಿದ್ದರು. ಬಳಿಕ ತನ್ನ ಮೊದಲ ಪತ್ನಿಯ ಮೂವರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾಳ ಮನೆಗೆ ಕರೆದುಕೊಂಡು ಬಂದಿದ್ದ. ಸೆಲ್ವಾ ಕೆಲಸಕ್ಕೆ ಹೋಗಿ ಮನೆಗೆ ಬರುತ್ತಿದ್ದಂತೆ ಸತ್ಯಾ ಮಕ್ಕಳ ಮೇಲೆ  ಗಂಡನಿಗೆ ಚಾಡಿ ಹೇಳುತ್ತಿದ್ದಳು. ಈ ರೀತಿ ಮಲತಾಯಿಯ ಮಾತು ಕೇಳಿ ಸೆಲ್ವಾ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದ. ಚಿತ್ರಹಿಂಸೆ ನೀಡುತ್ತಿದ್ದ. ಸ್ವಂತ ಮಕ್ಕಳು ಎನ್ನದೇ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ದೋಸೆ ಎತ್ತುವ ಮೊಗಚೆ ಕೈನಿಂದ ಬರೆ ಎಳೆದಿದ್ದ. ನೋವನ್ನು ಸಹಿಸಲಾಗದೆ  ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದ ನೆರೆಮನೆಯವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ಕೊಲೆಯತ್ನ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು ಪಾಪಿ ತಂದೆಯನ್ನು  ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ
ಮೂರು ಮಕ್ಕಳ ಪೈಕಿ ಇಬ್ಬರು ಮಕ್ಕಳಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು, ಪ್ರಸ್ತುತ ಮಕ್ಕಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಪೊಲೀಸರ ಬಳಿ ಮಕ್ಕಳ ಹೇಳಿಕೆ ದಾಖಲು
ಇನ್ನು ಪೊಲೀಸರ ಬಳಿ ಅಳುತ್ತಲೇ ಮಕ್ಕಳು ತಮ್ಮ ಹೇಳಿಕೆ ದಾಖಲಿಸಿದ್ದು, 'ಭಿಕ್ಷೆ ಬೇಡಲು ಕಳುಹಿಸುತ್ತೀನಿ ಎಂದು ಅಮ್ಮ ಹೇಳ್ತಿದ್ಳು. ಕಾರಣ ಹೇಳದೆ ಅಮ್ಮ ಹೊಡೀತಿದ್ದಳು. ಅಮ್ಮನ ಮಾತು ಕೇಳಿ ಅಪ್ಪಾನೂ ಹೊಡೀತಿದ್ರು. ನಮಗೆ ಮಲಗಲು ಜಾಗವನ್ನೂ ಕೊಡುತ್ತಿರಲಿಲ್ಲ. ಮಂಚದ ಕೆಳಗೆ ಬಾಕ್ಸ್ ಇತ್ತು. ನಾವು  ಅದರಲ್ಲಿ ಮಲಗುತ್ತಿದ್ವಿ. ಪ್ರತೀ ದಿನ ಹೋಡೆಯುತ್ತಿದ್ರು, ಅಮ್ಮ ಜಾಸ್ತಿ ಹೊಡೆಯುತ್ತಾಳೆ ಎಂದು ಮಕ್ಕಳು ಕಣ್ಣೀರು ಹಾಕುತ್ತ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮಕ್ಕಳ ಹೇಳಿಕೆ ಪಡೆದಿರುವ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಹೇಳಿಕೆ ಬಳಿಕ ಸೆಲ್ವ-2ನೇ ಪತ್ನಿಯನ್ನೂ ಕೂಡ ಬಂಧಿಸಲಾಗಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com