ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯ ಮತ್ತೊಂದು ಸಾಧನೆ: ಔಷಧಿ ಸಾಗಾಟಕ್ಕೆ ಡ್ರೋಣ್ ಬಳಕೆ, ಯಶಸ್ವಿ ಪ್ರಯೋಗ
ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಜೊತೆಗೆ ಚರ್ಚೆಗೆ ಗ್ರಾಸವಾಗಿರುವ ಡ್ರೋಣ್ ಬಳಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಔಷಧಿ ಸಾಗಾಟ ಮಾಡುವ ಪ್ರಾಯೋಗಿಕ ತರಬೇತಿಗೆ ಸಾಕ್ಷಿಯಾಗಿರುವ ಜಿಲ್ಲೆಯ ಗೌರಬಿದನೂರಿನಲ್ಲಿ ಮಂಗಳವಾರ ಕೂಡ ಎರಡನೇ ದಿನದ ಪ್ರಾಯೋಗಿಕ ಪ್ರಯೋಗ ಹೊಸ ಭರವಸೆಯನ್ನು ಹುಟ್ಟಿಸಿದೆ.
Published: 23rd June 2021 12:08 PM | Last Updated: 23rd June 2021 01:34 PM | A+A A-

ವೈದ್ಯಕೀಯ ಡ್ರೋಣ್
ಚಿಕ್ಕಬಳ್ಳಾಪುರ: ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಜೊತೆಗೆ ಚರ್ಚೆಗೆ ಗ್ರಾಸವಾಗಿರುವ ಡ್ರೋಣ್ ಬಳಸಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಔಷಧಿ ಸಾಗಾಟ ಮಾಡುವ ಪ್ರಾಯೋಗಿಕ ತರಬೇತಿಗೆ ಸಾಕ್ಷಿಯಾಗಿರುವ ಜಿಲ್ಲೆಯ ಗೌರಬಿದನೂರಿನಲ್ಲಿ ಮಂಗಳವಾರ ಕೂಡ ಎರಡನೇ ದಿನದ ಪ್ರಾಯೋಗಿಕ ಪ್ರಯೋಗ ಹೊಸ ಭರವಸೆಯನ್ನು ಹುಟ್ಟಿಸಿದೆ.
ಜಿಲ್ಲೆಯ ಗೌರಿಬಿದನೂರು ಸಮೀಪದ ಶಂಭುಕನಗರದಲ್ಲಿ ರಾಜ್ಯದ ಪ್ರತಿಷ್ಠಿತ ಟಿಎಎಸ್ ಕಂಪನಿ ಸಾರಥ್ಯದಲ್ಲಿ ನಡೆಯುತ್ತಿರುವ ಡ್ರೋಣ್ ಬಳಸಿ ಔಷಧಿ ಸಾಗಾಟ ಪ್ರಯೋಗ ಎರಡನೇ ದಿನವೂ ಮುಂದುವರೆದಿದ್ದು, ಕಂಪನಿಯ ಪಾಲುದಾರರಾದ ನಾಗೇಂದ್ರ ಹಾಗೂ ಗಿರೀಶರೆಡ್ಡಿ ಸಾರಥ್ಯದಲ್ಲಿ ನಡೆಯುತ್ತಿರುವ ಪ್ರಯೋಗ ಯಶಸ್ವಿಗೊಳ್ಳುವುದರತ್ತ ದಾಪುಗಾಲು ಇಡುತ್ತಿದೆ.
ಮುಂದುವರೆದ ದೇಶಗಳಲ್ಲಿ ಡ್ರೋಣ್ ಬಳಸಿ ಔಷಧಿ ಸಾಗಾಟ ಮಾಡುವ ರೀತಿಯಲ್ಲಿ ಭಾರತದಲ್ಲಿಯೇ ಮೊದಲ ಬಾರಿಗೆ ಡ್ರೋಣ್ ಬಳಸಿ ಔಷಧಿ ಸಾಗಾಟ ಕನಸನ್ನು ಈಡೇರಿಸುವ ಡಿಕ್ಕಿನಲ್ಲಿ ಟಿಎಎಸ್ ಕಂಪನಿ ಮುಂದಾಗಿದೆ. ಸೋಮವಾರದಿಂದ ಪ್ರಾಯೋಗಿಕ ತರಬೇತಿ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ಎರಡು ಡ್ರೋಣ್ ಗಳನ್ನು ಬಳಸಿ 2ರಿಂದ 3 ಕಿಮೀ ಅಂತರದಲ್ಲಿ ಮೊದಲ ಹಂತದಲ್ಲಿ ಔಷಧಿ ಸಾಗಾಟ ಬಗ್ಗೆ ಟ್ರೈಲ್ ನಡೆಯುತ್ತಿದ್ದು, ಕನಿಷ್ಟ ಒಂದೇ ಬಾರಿ 5 ಕೆಜಿಯಷ್ಟು ಔಷಧಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಸಾಮರ್ಥ್ಯ ಇರುವ ಡ್ರೋಣ್ ಗಳನ್ನು ಪ್ರಯೋಗಿಕ ತರಬೇತಿಗೆ ಬಳಸಲಾಗುತ್ತಿದೆ.
ಈಗಾಗಲೇ ದೇಶದ ರಕ್ಷಣಾ ಇಲಾಖೆ, ಬೆಂಗಳೂರಿನ ಡಾ.ದೇವಿಶೆಟ್ಟಿ ಅವರ ಆಸ್ಪತ್ರೆಯಿಂದ ಇಂತಹ ಅಭಿವೃದ್ಧಿ ಹೊಂದಿದ್ದ ಡ್ರೋಣ್ ಗಳಿಗೆ ಬೇಡಿಕೆ ಬಂದಿದ್ದು, ಒಟ್ಟು 45 ದಿನಗಳ ಕಾಲ ನಿರಂತರವಾಗಿ ನಡೆಯಲಿರುವ ಡ್ರೋಣ್ ಪ್ರಯೋಗ ತರಬೇತಿ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಹುಟ್ಟಿಸಿದೆ.
ಈ ಪ್ರಯೋಗವನ್ನು ನಡೆಸಲು ವಿಮಾನಯಾನ ಇಲಾಖೆಯ ಪ್ರಧಾನ ನಿರ್ದೇಶಕರಿಂದ ಅನುಮತಿಪಡೆಯಲಾಗಿತ್ತು.ಔಷಧಿಯನ್ನು ತುರ್ತುಪರಿಸ್ಥಿತಿಯಲ್ಲಿ ಕೊಂಡೊಯ್ಯಬಹುದಾಗಿದೆ. ಈ ಪ್ರಯೋಗವನ್ನು ನೂರು ಬಗೆಯಲ್ಲಿ ಮಾಡಿ ಅದನ್ನು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ಪ್ರಧಾನ ನಿರ್ದೇಶಕರಿಗೆ ಕಳುಹಿಸಲಾಗುವುದು ಎಂದು ನಾಗೇಂದ್ರನ್ ಅವರು ಮಾಹಿತಿ ನೀಡಿದ್ದಾರೆ.
ಪ್ರಯೋಗವನ್ನು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಸಲಾಗಿದೆ. ಈ ಪ್ರಯೋಗ ಇನ್ನೂ 30-40 ದಿನಗಳ ಕಾಲ ಮುಂದುವರೆಯಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ, ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರುವ ಬೀಮ್ ಸಮಿತಿಯು ಪ್ರಯೋಗ ಕುರಿತು ಮೇಲ್ವಿಚಾರಣೆ ಮಾಡುತ್ತಿದೆ. ಡಿಜಿಸಿಎ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ.
ಸರ್ಕಾರ ನಮ್ಮ ಪ್ರಯೋಗದ ವಿವರಗಳನ್ನು ಗಮನಿಸಿ ಇದರ ಉಪಯೋಗವನ್ನು ರಕ್ಷಣಾ ಇಲಾಖೆ ಹಾಗೂ ಆಸ್ಪತ್ರೆಗಳಿಗೆ ತುರ್ತು ಔಷಧಿ ಹಾಗೂ ರಕ್ತವನ್ನು ಸರಬರಾಜು ಮಾಡಿಕೊಳ್ಳಲು ಅನುಮತಿ ನೀಡಬಹುದು ಎಂದು ತಿಳಿಸಿದ್ದಾರೆ.