ಕೋವಿಡ್ ಲಸಿಕೆ ಅಭಿಯಾನ: ರಾಜ್ಯದಲ್ಲಿ ಮೈಸೂರು ಜಿಲ್ಲೆಗೆ ಎರಡನೇ ಸ್ಥಾನ, ಬೆಂಗಳೂರು ಮೊದಲು!
ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ದರ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ ಮಧ್ಯೆ ಸಣ್ಣದೊಂದು ಆಶಾರೇಖೆ ಮೂಡಿದೆ. ಲಸಿಕೆ ನೀಡಿಕೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ.
Published: 23rd June 2021 09:15 AM | Last Updated: 23rd June 2021 01:15 PM | A+A A-

ಮಹಾರಾಣಿ ಕಾಲೇಜು ಎದುರು ಲಸಿಕೆಗೆ ಕಾಯುತ್ತಿರುವ ಜನರು
ಮೈಸೂರು: ರಾಜ್ಯದಲ್ಲಿ ಅತಿ ಹೆಚ್ಚು ಕೋವಿಡ್-19 ಪಾಸಿಟಿವ್ ದರ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ ಮಧ್ಯೆ ಸಣ್ಣದೊಂದು ಆಶಾರೇಖೆ ಮೂಡಿದೆ. ಲಸಿಕೆ ನೀಡಿಕೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ಮೈಸೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ.
ಮೊನ್ನೆ ಜೂನ್ 21ಕ್ಕೆ ಜಿಲ್ಲೆಯಲ್ಲಿ 10 ಲಕ್ಷದ 96 ಸಾವಿರದ 015 ಮಂದಿಗೆ ಲಸಿಕೆ ನೀಡಲಾಗಿದ್ದು ಒಟ್ಟು ಗುರಿಯ ಶೇಕಡಾ 33.4ರಷ್ಟು ಲಸಿಕೆ ನೀಡಿಕೆಯ ಗುರಿಯನ್ನು ತಲುಪಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಆರೋಗ್ಯ ವಲಯ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಿಕೆಯಲ್ಲಿ ಮೈಸೂರು ಜಿಲ್ಲೆ ಮುಂಚೂಣಿಯಲ್ಲಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾ ನೋಡಲ್ ಅಧಿಕಾರಿ ಡಾ ಎಲ್ ರವಿ, ತಂಡದವರ ಒಟ್ಟು ಕೆಲಸದವರಿಂದ ಇದು ಸಾಧ್ಯವಾಯಿತು. ಉಳಿದ ಎಲ್ಲಾ ಇಲಾಖೆಗಳ, ಚುನಾವಣಾ ಪ್ರತಿನಿಧಿಗಳು, ಆಶಾ ಕಾರ್ಯಕರ್ತರೆಯರು, ಕಾರ್ಯ ಪಡೆ ಸಮಿತಿಗಳು ಒಟ್ಟು ಸೇರಿ ಕೆಲಸ ಮಾಡಿದ್ದರಿಂದ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಯಿತು. ಆದ್ಯತೆ ಗುಂಪುಗಳಿಗೆ ಲಸಿಕೆ ನೀಡುವ ಕಾರ್ಯದಲ್ಲಿ ಆದಷ್ಟು ಯಶಸ್ವಿಯಾಗಿದ್ದೇವೆ ಎಂದರು.
ಈ ಮಧ್ಯೆ, ಜಿಲ್ಲೆಯ ಹಲವಾರು ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರಗಳಲ್ಲಿ ಲಸಿಕೆ ಅಭಿಯಾನ ನಡೆಸಲು ವಿಶೇಷ ಆಸಕ್ತಿ ವಹಿಸಿದ್ದು, 18-44 ವರ್ಷದೊಳಗಿನ ಎಲ್ಲರಿಗೂ ಉಚಿತ ಲಸಿಕೆ ನೀಡಲು ಮುಂದಾಗಿದ್ದಾರೆ. ಶಾಸಕರಾದ ಎಸ್ ಎ ರಾಮದಾಸ್ ಮತ್ತು ಎಲ್ ನಾಗೇಂದ್ರ ಅವರು ವಾರ್ಡ್‌ಗಳಲ್ಲಿ ವಿಶೇಷ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ನಿನ್ನೆ ಮತ್ತು ಮೊನ್ನೆ, ಜಿಲ್ಲೆಯ 75 ಸಾವಿರಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ.