ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಆನ್'ಲೈನ್ ತರಗತಿಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಇದರಂತೆ ಡಿಜಿಟಲ್ ಕಲಿಕಾ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸುವ ಯೋಜನೆಯೊಂದಕ್ಕೆ ಬುಧವಾರ ಚಾಲನೆ ನೀಡಿದೆ. 
ಟ್ಯಾಬ್ ಪಡೆದುಕೊಂಡ ವಿದ್ಯಾರ್ಥಿಗಳು
ಟ್ಯಾಬ್ ಪಡೆದುಕೊಂಡ ವಿದ್ಯಾರ್ಥಿಗಳು

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಆನ್'ಲೈನ್ ತರಗತಿಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಇದರಂತೆ ಡಿಜಿಟಲ್ ಕಲಿಕಾ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಿಸುವ ಯೋಜನೆಯೊಂದಕ್ಕೆ ಬುಧವಾರ ಚಾಲನೆ ನೀಡಿದೆ. 

ಕೋವಿಡ್ ಸಂಕಷ್ಟದಲ್ಲಿ ಉನ್ನತ ಶಿಕ್ಷಣ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ಗಳನ್ನು ವಿತರಣೆ ಮಾಡುವ ಯೋಜನೆಗೆ ಚಾಲನೆ ಹಾಗೂ ಸ್ಮಾರ್ಟ್ ತರಗತಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು. 

ಬಳಿಕ ಮಾತನಾಡಿದ ಅವರು, 2021-22ನೇ ಸಾಲಿನಲ್ಲಿ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಟ್ಯಾಬ್ಲೆಟ್ ಪಿ.ಸಿ. ನೀಡಲಾಗುವುದು ಎಂದು ತಿಳಿಸಿದರು.

ಡಿಜಿಟಲ್ ಕಲಿಕೆ ಯೋಜನೆಯ ಮೂಲಕ ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು 21ನೇ ಶತಮಾನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅವರನ್ನು ಸಿದ್ಧಗೊಳಿಸಲಾಗುತ್ತಿದೆ. ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿರ್ಲಕ್ಷಿತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತರಾಗದಂತೆ, ಈ ಕಾರ್ಯಕ್ರಮ ಖಾತ್ರಿಪಡಿಸುತ್ತದೆ ಎಂದರು.

ಈ ತರಗತಿ ಕೊಠಡಿಗಳಲ್ಲಿ ಪ್ರೊಜೆಕ್ಟರ್, ವೈಟ್ ಬೋರ್ಡ್, ಆ್ಯಂಡ್ರಾಯ್ಡ್ ಬಾಕ್ಸ್, ಯುಪಿಎಸ್ ಮತ್ತು ಇಂಟರ್ನೆಟ್ ಸೌಲಭ್ಯವಿದ್ದು ಆಧುನಿಕ ಬೋಧನೆ-ಕಲಿಕೆಗಳಿಗೆ ಪೂರಕವಾಗಿರಲಿದೆ. ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ವಿದ್ಯಾರ್ಥಿಗಳ ಕಲಿಕೆ ನಿರಾತಂಕವಾಗಿ ಮುಂದುವರಿಯಬೇಕು ಎನ್ನುವ ಉದ್ದೇಶದಿಂದ ಡಿಜಿಟಲ್ ಲರ್ನಿಂಗ್ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ ಎಂದರು.

ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ ಅವರು ಮಾತನಾಡಿ, ಡಿಜಿಟಲ್ ಕಲಿಕೆ ಯೋಜನೆಯ ಪ್ರಥಮ ಹಂತದಲ್ಲಿ 27.77 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಅನುಸ್ಥಾಪಿಸಲಾಗಿದೆ. ಒಟ್ಟು 1.55 ಲಕ್ಷ ವಿದ್ಯಾರ್ಥಿಗಳಿಗೆ 163 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಕಲಿಕೆ ಯೋಜನೆಯ ಅಂಗವಾಗಿ ಟ್ಯಾಬ್ಲೆಟ್ ಪಿ.ಸಿ.ಗಳನ್ನು ವಿತರಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ ಉನ್ನತ ಶಿಕ್ಷಣ ವ್ಯಾಪ್ತಿಯ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ, 87 ಸರ್ಕಾರಿ ಪಾಲಿಟೆಕ್ನಿಕ್ಗಳ ಪ್ರಥಮ-ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಹಾಗೂ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಪ್ರಥಮ-ದ್ವಿತೀಯ ಹಾಗೂ ತೃತೀಯ ವರ್ಷದ ವಿದ್ಯಾರ್ಥಿಗಳಿಗೆ, ಈ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

4.07 ಕೋಟಿ ರೂ.ಗಳ ವೆಚ್ಚದಲ್ಲಿ ಆನ್ಲೈನ್-ಆಫ್ಲೈನ್ ಎರಡೂ ಪದ್ಧತಿಯ ಕಲಿಕೆಗೆ ಅನುರೂಪವಾದ ‘ಕರ್ನಾಟಕ ಎಲ್.ಎಂ.ಎಸ್ʼ ಎಂಬ ಸಮಗ್ರ ಕಲಿಕಾ ನಿರ್ವಹಣಾ ವೇದಿಕೆಯ ಮೂಲಕ ಪರಿಷೃತ ಮತ್ತು ಆಧುನಿಕ ರೀತಿಯ ಬೋಧನೆ-ಕಲಿಕೆಗಳನ್ನು ರೂಢಿಗೆ ತರಲಾಗುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯ ಎಂದರು. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ಯೋಜನೆಯನ್ನುಅನುಷ್ಠಾನಗೊಳಿಸಲಾಗಿದ್ದು ವಿದ್ಯಾರ್ಥಿಗಳು ಈ ಸೌಲಭ್ಯ ಸದುಪಯೋಗ ಪಡೆಯಬೇಕೆಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com