ರಾಜ್ಯದಲ್ಲಿ ಇದೇ ಮೊದಲು: ವೈದ್ಯರೊಬ್ಬರಲ್ಲಿ ಬ್ಲ್ಯಾಕ್, ಗ್ರೀನ್ ಫಂಗಸ್ ಪತ್ತೆ!

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಮತ್ತು ಗ್ರೀನ್ ಫಂಗಸ್ ಸೋಂಕು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಬ್ಲ್ಯಾಕ್ ಮತ್ತು ಗ್ರೀನ್ ಫಂಗಸ್ ಸೋಂಕು ಪತ್ತೆಯಾಗಿದೆ. 

ಬೆಂಗಳೂರು ಪೀಡಿಯಾಟ್ರಿಕ್ ಫಿಸಿಯೋಥೆರಪಿಸ್ಟ್ (ಮಕ್ಕಳ ಭೌತಚಿಕಿತ್ಸಕ) ಡಾ.ಕಾರ್ತಿಕೇಯನ್ ಆರ್ ಎಂಬ ವೈದ್ಯರಲ್ಲಿ ಈ ಸೋಂಕು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. 

ಕಳೆದ ಏಪ್ರಿಲ್ ತಿಂಗಳಿನಲ್ಲಿ ವೈದ್ಯರಿಗೆ ಕೊರೋನಾ ಸೋಂಕು ತಗುಲಿದ್ದು. ಬಳಿಕ ಅವರ ಮುಖ ಹಾಗೂ ತಲೆಯಲ್ಲಿ ಅತೀವ್ರ ನೋವು ಕಾಣಿಸಿಕೊಂಡಿದೆ, ನಂತರ ಮೂಗು ಸೋರುವ ಸಮಸ್ಯೆ ಕಾಣಿಸಿಕೊಂಡಿದೆ. ಸಮಸ್ಯೆ ಆರಂಭವಾಗುತ್ತಿದ್ದಂತೆಯೇ ವೈದ್ಯ ಮೈಸೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆದ .

ವ್ಯಕ್ತಿಯ ಆರೋಗ್ಯ ಸ್ಥಿತಿ ಬ್ಲ್ಯಾಕ್ ಫಂಗಸ್'ನ ಸಾಮಾನ್ಯ ಲಕ್ಷಣದಂತೆ ಇರಲಿಲ್ಲ. ಮೂಗಿನಲ್ಲಿ ಹಸಿರು ಹಾಗೂ ಕಂದು ಬಣ್ಣದ ದ್ರವ ಕಂಡು ಬಂದಿತ್ತು. ಫಂಗಲ್ ಕಲ್ಚರ್ ನಲ್ಲಿ ಗ್ರೀನ್ ಫಂಗಸ್ ಇರುವುದು ದೃಢಪಟ್ಟಿತ್ತು. ಎಂಡೋಸ್ಕೋಪಿಯಲ್ಲಿ ಮೂಗಿನಲ್ಲಿ ಕೀವು ಇರುವುದು ಕಂಡು ಬಂದಿತ್ತು. ನಂತರ ಸಿಟಿ ಹಾಗೂ ಎಂಆರ್'ಐ ಸ್ಕ್ಯಾನ್ ನಲ್ಲಿ ಶಿಲೀಂಧ್ರ ಸೋಂಕು ಇರುವುದು ದೃಢಪಟ್ಟಿತ್ತು. 

ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಮೂಗಿನ ಮೂಳೆಯನ್ನು ಕೊರೆದು ಸತ್ತ ಅಂಗಾಂಶಗಳನ್ನು ತೆಗೆದುಹಾಕಲಾಗಿದೆ. ಅಂಗಾಂಶಗಳಿಗೆ ರಕ್ತ ಪೂರೈಕೆ ಮಾಡುವುದರ ಮೇಲೆ ಕಪ್ಪು ಶಿಲೀಂಧ್ರ ಪರಿಣಾಮ ಬೀರುತ್ತದೆ. ಬಳಿಕ ಸತ್ತ ಅಂಗಾಂಶಗಳ ಮೇಲೆ ಈ ಶಿಲೀಂಧ್ರ ಬೆಳೆಯುವುದರಿಂದ ಆ್ಯಂಟಿ ಫಂಗಲ್ ಔಷಧಿ ಒಂದರಿಂದ ಈ ಸಮಸ್ಯೆ ಗುಣವಾಗುವುದಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಗೆ ಆ್ಯಂಟಿ ಫಂಗಲ್ ಔಷಧಿ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಬಿಜಿಎಸ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಇಎನ್‌ಟಿ ಮತ್ತು ಎಂಡೋಸ್ಕೋಪಿಕ್ ಸ್ಕಲ್ ಬೇಸ್ ಸರ್ಜನ್'ನ ಮುಖ್ಯ ಸಲಹೆಗಾರ ಡಾ.ಪ್ರಶಾಂತ್ ಆರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. 

ವ್ಯಕ್ತಿಯಲ್ಲಿ ಈ ಹಿಂದೆ ಮಧುಮೇಹ ಸಮಸ್ಯೆ ಇರಲಿಲ್ಲ. ಆದರೆ, ಕೊರೋನಾ ಸೋಂಕಿನ ಬಳಿಕ ಸಮಸ್ಯೆ ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುವ ವೇಳೆ ಇವರಿಗೆ ಸ್ಟಿರಾಯ್ಡ್ ಗಳನ್ನು ನೀಡಲಾಗಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಹೋಗಿದ್ದರೆ, ಬದುಕುಳಿಯುವುದು ಕಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ. 

4-5 ದಿನ ಮೈಸೂರಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದೆ. ಈ ವೇಳೆ ಆರೋಗ್ಯ ಸುಧಾರಿಸುತ್ತಿತ್ತು. ವೆಂಟಿಲೇಟರ್ ತೆಗೆದು ಆಕ್ಸಿಜನ್ ನೀಡಲಾಗಿತ್ತು. ಇದಾದ ಬಳಿಕ ಮುಖದ ಬಲಭಾಗದಲ್ಲಿ ಅತೀವ್ರ ನೋವು ಕಾಣಿಸಿಕೊಂಡಿತ್ತು. ಬಳಿಕ ಅತೀವ್ರ ತಲೆನೋವು ಶುರುವಾಗಿತ್ತು ಎಂದು ಸೋಂಕಿತ ವೈದ್ಯರ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com