ಬಿತ್ತನೆ ಬೀಜ ಕೊರತೆ ಬಗ್ಗೆ ವಿರೋಧ ಪಕ್ಷ ಆರೋಪ: ಬೆಳೆ ಬಿತ್ತನೆ ಕ್ರಮ ಬದಲಾವಣೆಯಿಂದ ಕೊರತೆ; ಸಚಿವರ ಸ್ಪಷ್ಟನೆ

ಮಾನ್ಸೂನ್ ಆಗಮಿಸಿದ್ದು ರೈತರು ಮುಂಗಾರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ, ಬಿತ್ತನೆ ಬೀಜ ಕೊರತೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾನ್ಸೂನ್ ಆಗಮಿಸಿದ್ದು ರೈತರು ಮುಂಗಾರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ, ಬಿತ್ತನೆ ಬೀಜ ಕೊರತೆಯಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೃಷಿ ಸಚಿವ ಬಿಸಿ ಪಾಟೀಲ್, ಕೆಲವು  ಜಿಲ್ಲೆಗಳಲ್ಲಿ ಬಿತ್ತನೆ ಕ್ರಮ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಸೋಯಾಬೀನ್ ಬೀಜದ ಕೊರತೆ ಉಂಟಾಗಿತ್ತು ಎಂದು ತಿಳಿಸಿದ್ದಾರೆ.

ಬಿತ್ತನೆ ಬೀಜ ಕೊರತೆ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಔರಾದ್ ಜಿಲ್ಲೆಗಳ ರೈತರಿಂದ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ನಾಯಕರು ಈ ಸಂಬಂಧ ಧ್ವನಿ ಎತ್ತಿದ್ದಾರೆ.

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ರೈತರಿಗೆ ಬಿತ್ತನೆ ಬೀಜ ಕೊರತೆಯ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಾರೆ,  ಬಿಜೆಪಿ ಸರ್ಕಾರ ರೈತರ ಪರವಾದದ್ದು ಎಂದು ಬರಿ ಬಾಯಿ ಮಾತಿನಲ್ಲಿ ಹೇಳುತ್ತದೆ, ಆದರೆ ರೈತರ ಪರ ಯಾವುದೇ ಯೋಜನೆ ಜಾರಿಗೆ ತರುತ್ತಿಲ್ಲ, ರಾಜ್ಯಾದ್ಯಂತ ಬಿತ್ತನೆ ಬೀಜದ ಕೊರತೆ ಎದುರಾಗಿದೆ, ಈಗಾಗಲೇ ಮೊದಲ ಮಳೆ ಆರಂಭವಾಗಿದೆ, ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.  ಆದರೆ ಬಿತ್ತನೆ ಬೀಜಗಳೇ ಸಿಗುತ್ತಿಲ್ಲ, ಒಂದು ವೇಳೆ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳದಿದ್ದರೇ ಮುಂದಿನ
ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಾಗಲಿದೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

ಡಿಎಪಿ ಯಂತ ರಸಗೊಬ್ಬರ, ಸೋಯಾಬೀನ್, ಹತ್ತಿ ಮತ್ತು ಮೆಣಸಿನಕಾಯಿ ಬೀಜದ ಕೊರತೆ ಎದುರಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ. 

ಬೇಡಿಕೆ ಹೆಚ್ಚಿದ ಕಾರಣ ಸೋಯಾಬೀನ್ ಬೀಜದ ಕೊರತೆ ಉಂಟಾಗಿದೆ, ಮೆಣಸಿನಕಾಯಿ ಬೀಜವನ್ನು ಸರ್ಕಾರ ಪೂರೈಸುವುದಿಲ್ಲ. ರೈತರು ಅವುಗಳನ್ನು ಖಾಸಗಿ ಕಂಪನಿಯಿಂದ ಖರೀದಿಸುತ್ತಾರೆ. ಪೂರೈಕೆಯನ್ನು ಹೆಚ್ಚಿಸಲು ನಾವು ಕಂಪನಿಯೊಂದಿಗೆ ಮಾತನಾಡಿದ್ದೇವೆ ಎಂದು ಸಚಿವ ಬಿಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. 

ಹತ್ತಿ ಬೀಜದ ಕೊರತೆ ಎಲ್ಲಿಯೂ ಎದುರಾಗಿಲ್ಲ, ಆದರೆ ಬಿತ್ತನೆ ಕ್ರಮ ಬದಲಾಯಿಸಿದ ಹಿನ್ನೆಲೆಯಲ್ಲಿ ಸೋಯಾಬೀನ್ ಬೀಜದ ಕೊರತೆ ಎದುರಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ 1.28 ಲಕ್ಷ ಕ್ವಿಂಟಾಲ್ ಸೋಯಾಬೀನ್ ಬೀಜ ವಿತರಿಸಿಲಾಗಿತ್ತು, ಈ ವರ್ಷ 1.67 ಲಕ್ಷ ಕ್ವಿಂಟಾಲ್ ವಿತರಿಸಲಾಗಿದೆ ಎಂದು ಬಿಸಿ ಪಾಟೀಲ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com