ನ್ಯಾಯಾಧಿಕರಣಗಳಿಗೂ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ: ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಹಿನ್ನೆಲೆ ರಾಜ್ಯದ ಅರೆ ನ್ಯಾಯಿಕ ಪ್ರಾಧಿಕಾರಗಳು ಹಾಗೂ ಮೇಲ್ಮನವಿ ನ್ಯಾಯಾಧಿಕರಣಗಳಿಗೂ ಕಲಾಪ ನಡೆಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸುವ ಕುರಿತಂತೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಹಿನ್ನೆಲೆ ರಾಜ್ಯದ ಅರೆ ನ್ಯಾಯಿಕ ಪ್ರಾಧಿಕಾರಗಳು ಹಾಗೂ ಮೇಲ್ಮನವಿ ನ್ಯಾಯಾಧಿಕರಣಗಳಿಗೂ ಕಲಾಪ ನಡೆಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಒದಗಿಸುವ ಕುರಿತಂತೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. 

ಸರ್ಕಾರಿ ಭೂಮಿ ಒತ್ತುವರಿ ಆರೋಪ ಪ್ರಕರಣವೊಂದರ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೋವಿಡ್ ಕಾರಣಕ್ಕಾಗಿ ತಹಶೀಲ್ದಾರ್​ (ಅರೆ ನ್ಯಾಯಿಕ ಅಧಿಕಾರ ಹೊಂದಿರುವ) ಒತ್ತುವರಿ ಕುರಿತ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಅಲ್ಲದೇ, ಕೊರೊನಾ ಸೋಂಕು ಉಲ್ಭಣಿಸಿರುವ ಹಿನ್ನೆಲೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ನಡೆಸುವ ಅರೆ ನ್ಯಾಯಿಕ ಪ್ರಾಧಿಕಾರಗಳ ವಿಚಾರಣಾ ಕಲಾಪಗಳು, ಮೇಲ್ಮನವಿ ನ್ಯಾಯಾಧೀಕರಣಗಳ ವಿಚಾರಣೆ, ಲೋಕಾಯುಕ್ತ ನ್ಯಾಯಾಲಯದ ಕಲಾಪಗಳು ನಡೆಯುತ್ತಿಲ್ಲ ಎಂದು ವಿವರಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ಕೊರೋನಾ ಒಂದು ಮತ್ತು ಎರಡನೇ ಅಲೆ ಎದುರಿಸುವ ಅವಧಿಯಲ್ಲೇ ಅರೆ ನ್ಯಾಯಿಕ ಪ್ರಾಧಿಕಾರಗಳಿಗೆ ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳ ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಬೇಕಿತ್ತು. ಇದೀಗ 3ನೇ ಅಲೆ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಅರೆ ನ್ಯಾಯಿಕ ಪ್ರಾಧಿಕಾರಿಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳಿಗೆ ವಿಸಿ ಸೌಲಭ್ಯ ಅಳವಡಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ, ವಿಪತ್ತು ಎದುರಾದ ಸಂದರ್ಭಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ರಾಜ್ಯದ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅದರಂತೆ, ರಾಜ್ಯದ ಎಲ್ಲಾ ಅರೆ ನ್ಯಾಯಿಕ ಪ್ರಾಧಿಕಾರಿಗಳು ಮತ್ತು ಮೇಲ್ಮನವಿ ನ್ಯಾಯಾಧಿಕರಣಗಳು ತಮ್ಮ ಮುಂದಿರುವ ಪ್ರಕರಣಗಳನ್ನು ತಡೆಯಿಲ್ಲದೇ ವಿಚಾರಣೆ ನಡೆಸಲು ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ತುರ್ತು ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಸೌಲಭ್ಯ ಕಲ್ಪಿಸಬೇಕು. ಪ್ರಸ್ತುತ ಎಷ್ಟು ಕಡೆ ಸೌಲಭ್ಯವಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 13ಕ್ಕೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com