ಬೆಲೆ ಕುಸಿತ: ಕೋಲಾರದಲ್ಲಿ ಮಾವಿನ ಹಣ್ಣುಗಳನ್ನು ರಸ್ತೆಗೆ ಸುರಿದು ಹೋದ ರೈತರು!

ಹಣ್ಣುಗಳ ರಾಜ ಮಾವಿಗೆ ಸೂಕ್ತ ಬೆಲೆ ಸಿಗದ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಅಪಾರ ಪ್ರಮಾಣದ ಮಾವಿನ ಹಣ್ಣನ್ನು ರಸ್ತೆಗೆ ಸುರಿದು ಹೋಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ರಸ್ತೆಗೆ ಮಾವು ಸುರಿದಿರುವ ರೈತರು
ರಸ್ತೆಗೆ ಮಾವು ಸುರಿದಿರುವ ರೈತರು

ಕೋಲಾರ: ಹಣ್ಣುಗಳ ರಾಜ ಮಾವಿಗೆ ಸೂಕ್ತ ಬೆಲೆ ಸಿಗದ ಹಿನ್ನಲೆಯಲ್ಲಿ ಮಾವು ಬೆಳೆಗಾರರು ಅಪಾರ ಪ್ರಮಾಣದ ಮಾವಿನ ಹಣ್ಣನ್ನು ರಸ್ತೆಗೆ ಸುರಿದು ಹೋಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಮಾವು ಬೆಳೆಗೇ ಖ್ಯಾತಿ ಗಳಿಸಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರಸ್ತೆ-ರಸ್ತೆಗಳಲ್ಲಿ ಮಾವುಗಳ ರಾಶಿಯನ್ನು ಕಸದಂತೆ ಸುರಿಯಲಾಗಿದೆ. ಸೂಕ್ತ ಬೆಲೆ ಮತ್ತು ಸಮಯಕ್ಕೆ ಸರಿಯಾಗಿ ಮಾವು ಮಾರುಕಟ್ಟೆಗೆ ವಿಲೇವಾರಿಯಾಗದ ಕಾರಣ ತೋತಾಪುರಿ ಹಣ್ಣಿನಲ್ಲಿ ಫಂಗಸ್ ಸೋಂಕು ಕಾಣಿಸಿಕೊಂಡಿದ್ದು, ಇದರಿಂದ  ರೈತರು ಅಪಾರ ಪ್ರಮಾಣದ ಮಾವಿನ ಬೆಳೆಯನ್ನು ರಸ್ತೆಗೆ ಸುರಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬೆಳೆಗಾರರು ತಮ್ಮ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದು, ಸರ್ಕಾರ ಈ ಬಗ್ಗೆ ದಿವ್ಯ ಮೌನವನ್ನು ವಹಿಸಿದೆ. 

ಕೊರೋನಾಘಾತ
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ರೈತರ ಪ್ರಮುಖ ಕಸುಬು ಮಾವು ಬೆಳೆ, ವಿಶ್ವದಲ್ಲೇ ಎಲ್ಲೂ ಸಿಗದ ವಿವಿಧ ತಳಿಯ ಮಾವು ಇಲ್ಲಿ ಬೆಳೆಯಲಾಗುತ್ತದೆ. ಹಾಗಾಗಿ ಇಲ್ಲಿನ ಮಾವಿನ ಹಣ್ಣನ್ನು ದೇಶ ಹಾಗೂ ವಿದೇಶಗಳಿಗೂ ರಪ್ತು ಮಾಡಲಾಗುತ್ತಿತ್ತು. ಇಂಥ ಮಾವಿನ ತವರಲ್ಲಿ ಈ ವರ್ಷ ಕೊರೊನಾ ತಂದ ಆಘಾತ ಮಾವು  ಬೆಳೆದ ರೈತರಿಗೆ ಹಿಂದೆಂದು ಕಾಣದಷ್ಟು ನಷ್ಟ ಉಂಟಾಗಿದೆ. ವರ್ಷದೊಂದೇ ಬೆಳೆಯಲ್ಲಿ ಜೀವನ ಸಾಗಿಸುವ ಇಲ್ಲಿನ ರೈತರು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಸಾಕಷ್ಟು ನಿರೀಕ್ಷೆಯಿಂದ ಮಾವನ್ನು ಬೆಳೆದಿದ್ದರು. ಆದರೆ ಮಾರುಕಟ್ಟೆಯಲ್ಲಿ ಮಾವಿಗೆ ಕನಿಷ್ಠ ಬೆಲೆಯೂ ಸಿಗದ ಹಿನ್ನೆಲೆ ರೈತರು ಆಘಾತಕ್ಕೊಳಗಾಗಿ  ದಿಕ್ಕು ತೋಚದಂತಾಗಿದ್ದಾರೆ. ಮಾವನ್ನು ಮರದಿಂದ ಕೀಳುವುದಾ? ಬೇಡವಾ? ಅನ್ನುವ ಪರಿಸ್ಥಿತಿಗೆ ಬಂದಿದ್ದಾರೆ. ಇನ್ನು ಈಗಾಗಲೇ ಕಟಾವು ಮಾಡಿರುವ ಕೆಲವರು ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗದೆ ರಸ್ತೆ ಬದಿಯಲ್ಲಿ ಸುರಿದು ಹೋಗಿದ್ದಾರೆ.

ಲಾಕ್‌ಡೌನ್‌ನಿಂದ ಮಾವು ಬೆಳೆಗಾರರಿಗೆ ಸಂಕಷ್ಟ
ಅತ್ತ ಮಾರುಕಟ್ಟೆಗೆ ಬಂದ ಮಾವು ಮಾರುಕಟ್ಟೆಯಲ್ಲೇ ಕೊಳೆಯುತ್ತಿದ್ದು, ಮಾವನ್ನು ವ್ಯಾಪಾರಸ್ಥರು ಬೇರೆ ದಾರಿ ಇಲ್ಲದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಈಗಿರುವ ಬೆಲೆಯಲ್ಲಿ ರೈತರು ಕಟಾವು ಮಾಡುವ ಖರ್ಚು ಸಿಗದಂತಾಗಿದೆ. ಈ ವರ್ಷ ಕೊರೊನಾ ನಡುವೆ ಮಾವು ಬೆಳೆಗಾರರು ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾನೆ.  ಹಾಗಾಗಿ ಸರ್ಕಾರ ಮಾವು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡುವ ಮೂಲಕ ರೈತರ ನೆರವಿಗೆ ಬರಬೇಕು ಅನ್ನೋದು ವ್ಯಾಪಾರಸ್ಥರು ಹಾಗೂ ರೈತರ ಬೇಡಿಕೆ. ಒಟ್ಟಿನಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಮಾವು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ರೈತ, ವ್ಯಾಪಾರಸ್ಥರು ಎಲ್ಲರೂ ಬೀದಿಗೆ ಬಿದ್ದಿದ್ದು,  ವರ್ಷದೊಂದೇ ಬೆಳೆಯಲ್ಲಿ ಜೀವನ ಕಟ್ಟಿಕೊಳ್ಳುತ್ತಿದ್ದವರ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಸರ್ಕಾರ ಅವರ ನೆರವಿಗೆ ಬಂದು ಸಂಕಷ್ಟದಲ್ಲಿರುವ ರೈತರಿಗೆ ಸಹಾಯ ಹಸ್ತ ಚಾಚಬೇಕಿದೆ.

ತೀವ್ರವಾಗಿ ಕುಸಿದ ಬೆಲೆ
ಈ ಬಗ್ಗೆ ಮಾತನಾಡಿರುವ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನೀಲತುರು ಚಿನ್ನಪ್ಪ ರೆಡ್ಡಿ ಅವರು, ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ರೈತರು ಹೆಚ್ಚು ನಷ್ಟ ಅನುಭವಿಸಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಮಾರುಕಟ್ಟೆಯಲ್ಲಿ ಬೆಲೆ ಕೂಡ ಕುಸಿತವಾಗಿದೆ.  ಬೈಗಾನ್ ಪಲ್ಲಿ ಮತ್ತು  ತೋತಾಪುರಿ ಮಾವುಗಳಿಗೆ ಗ್ರಾಹಕರು ಸರಿಯಾಗಿ ಸಿಗುತ್ತಿಲ್ಲ. 2019ರಲ್ಲಿ ಪ್ರತೀ ಟನ್ ಬೈಗಾನ್ ಪಲ್ಲಿ ಮಾವು 1 ಲಕ್ಷ ರೂಗೆ ಮಾರಾಟವಾಗಿತ್ತು. ಆದರೆ ಕಳೆದ ವರ್ಷ 50 ಸಾವಿರದಿಂದ 80 ಸಾವಿರ ರೂಗೆ ಕುಸಿತವಾಗಿತ್ತು. ಈ ವರ್ಷ ಈ ಪ್ರಮಾಣ ಇನ್ನೂ ಧಾರುಣ ಸ್ಥಿತಿಗೆ ಕುಸಿದಿದ್ದು, ಪ್ರತೀ ಟನ್ ಗೆ ಕೇವಲ 8 ರಿಂದ  15 ಸಾವಿರ ರೂ ಕೇಳುತ್ತಿದ್ದಾರೆ. ಇದು ಮಾವು ಕಟಾವಿಗೆ ರೈತರು ವ್ಯಯಿಸಿರುವ ಹಣಕ್ಕೆ ಅರ್ಧದಷ್ಟೂ ಆಗುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ರೈತರ ತಲೆನೋವಿಗೆ ಕಾರಣವಾದ ಆಂಧ್ರ ಪ್ರದೇಶ ಸರ್ಕಾರದ ಆದೇಶ
ವಾರ್ಷಿಕ ನಿರ್ವಹಣಾ ವೆಚ್ಚ ಪಡೆಯಲೂ ಕೂಡ ರೈತರು ಸಂಕಷ್ಟ ಪಡುತ್ತಿದ್ದು,  ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಮ್ಯಾಂಗೋ ಪಲ್ಪ್ ಕಾರ್ಖಾನೆಗಳಿಲ್ಲ. ಇದಕ್ಕಾಗಿ ನಾವು ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳ ಮೇಲೆ ಅವಲಂಬಿತರಾಗಿದ್ದೇವೆ. ತೋತಾಪುರಿ ಮಾವನ್ನು ಎರಡೂ ರಾಜ್ಯಗಳಲ್ಲಿ ಬೆಳೆಯುತ್ತಾರೆ.  ಹೀಗಾಗಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ರೈತರು ಮಾವುಗಳಿಗಾಗಿ ಶ್ರೀನಿವಾಸ ಪುರಕ್ಕೆ ಬರುವುದಿಲ್ಲ. ಇದರಿಂದ ಇಲ್ಲಿ ಬೇಡಿಕೆ ತೀವ್ರವಾಗಿ ಕುಸಿಯುತ್ತಿದೆ.ಅಲ್ಲದೆ ಆಂಧ್ರ ಪ್ರದೇಶ ಸರ್ಕಾರ ತನ್ನ ವ್ಯಾಪಾರಿಗಳಿಗೆ ಕಠಿಣ ಸೂಚನೆ ನೀಡಿದ್ದು, ಸ್ಥಳೀಯರಿಂದಲೇ ತೋತಾಪುರಿ ಮಾವನ್ನು ಖರೀದಿಸಬೇಕು ಎಂದು  ಸೂಚನೆ ನೀಡಿದೆ. ಹೀಗಾಗಿ ಅಲ್ಲಿನ ವ್ಯಾಪಾರಿಗಳು ಪ್ರತೀ ಟನ್ ಗೆ 10 ಸಾವಿರ ರೂ ನೀಡಿ ಖರೀದಿ ಮಾಡುತ್ತಿದ್ದಾರೆ.

ಇದರಿಂದ ಕೋಲಾರದ ರೈತರಿಗೆ ಭಾರಿ ತೊಂದರೆಯಾಗುತ್ತಿದ್ದು, ಇಲ್ಲಿ ಶ್ರೀನಿವಾಸಪುರವೊಂದರಲ್ಲೇ ರೈತರು ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲೆ ಬೆಳೆ ಕೈಗೆ ಸಿಕ್ಕರೂ ಅವುಗಳನ್ನು ಮಾರಾಟ ಮಾಡಲಾಗದೆ ರೈತರು ಹೈರಾಣಾಗಿದ್ದಾರೆ ಎಂದು  ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com