ರಾಜ್ಯದಲ್ಲಿ ಮತ್ತೆ ಏರಿದ ಕೊರೋನಾ: ನಿನ್ನೆ 4 ಸಾವಿರಕ್ಕೂ ಹೆಚ್ಚು ಹೊಸ ಕೇಸ್ ಪತ್ತೆ

ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ಅರಂಭಿಸಿದೆ. ರಾಜ್ಯದಲ್ಲಿ ಶನಿವಾರ 4,272 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆಯೇ ರಾಜ್ಯದಲ್ಲಿ ಮಹಾಮಾರಿ ಕೊರೋನಾ ವೈರಸ್ ತನ್ನ ಆರ್ಭಟವನ್ನು ಮತ್ತೆ ಆರಂಭ ಮಾಡಿರುವ ಸೂಚನೆ ಕಂಡು ಬರುತ್ತಿದೆ. ರಾಜ್ಯದಲ್ಲಿ ಶನಿವಾರ 4,272 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. 

ಕಳೆದ ಒಂದು ವಾರದಿಂದ ಸೋಂಕಿನ ಪ್ರಮಾಣ ಇಳಿಕೆ ಕ್ರಮಾಂಕದಲ್ಲಿದ್ದ ಕಾರಣ ಸಕ್ರಿಯ ಸೋಂಕು ಪ್ರಕರಣಗಳು ಒಂದು ಲಕ್ಷದ ಆಸುಪಾಸಿಗೆ ಕುಸಿದಿದೆ. ಈ ನಡುವೆ ಪಾಸಿಟಿವಿಟಿ ಪ್ರಮಾಣ ಶೇ.8.43 ರಿಂದ ಶೇ.8.40ಕ್ಕೆ ಇಳಿಕೆಯಾಗಿದೆ. 

ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಅಂತ್ಯದಲ್ಲಿದ್ದು, ಮೂರು ಅಂಕಿಗೆ ಸೋಂಕಿತರ ಸಂಖ್ಯೆ ಬರುವವರೆಗೂ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಕೋವಿಡ್ ತಾಂತ್ರಿಕ ಸಮಿತಿಯ ಸದಸ್ಯರಾಗಿರುವ ಡಾ.ಸಿಎನ್. ಮಂಜುನಾಥ್ ಅವರು ಮಾತನಾಡಿ, ರಾಜ್ಯದಲ್ಲಿ ದೈನಂದಿನ ಪರೀಕ್ಷೆಯ ಸಂಖ್ಯೆ 1.7 ಲಕ್ಷಕ್ಕೆ ಏರಿಕೆಯಾಗಿದೆ. ಇದಲ್ಲದೆ, ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಪ್ರಯಾಣಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಇದೀಗ ನಾವು ಕೊರೋನಾ 2ನೇ ಅಲೆಯ ಅಂತಿಮ ಹಂತದಲ್ಲಿದ್ದೇವೆ. ಮೊದಲ ಅಲೆ ಅಂತ್ಯದಲ್ಲಿ ಮೂರು ಅಂಕಿಗಳ ಸೋಂಕನ್ನು ನೋಡಿದ್ದೆವು. ಶೀಘ್ರದಲ್ಲೇ ಮೂರಂಕಿ ಸೋಂಕಿತರ ಸಂಖ್ಯೆ ನೋಡಲಿದ್ದೇವೆಂದು ಹೇಳಿದ್ದಾರೆ. 

ಈ ನಡುವೆ ರಾಜ್ಯದಲ್ಲಿ ನಿನ್ನೆ ಒಂದೇ ದಿನ 115 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಪ್ರಮಾಣ ಶೇ.1.22ಕ್ಕೆ ಏರಿಕೆಯಾಗಿದೆ. 115 ಮಂದಿ ಪೈಕಿ ಬೆಂಗಳೂರು ನಗರ (16), ಮೈಸೂರು (26), ದಕ್ಷಿಣ ಕನ್ನಡ (14)ದಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿವೆ. 

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ನಿನ್ನೆ ಸೋಂಕು ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ನಗರದಲ್ಲಿ ನಿನ್ನೆ 955 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. 

ಜನರು ಭಯವಿಲ್ಲದಂತೆ ಓಡಾಡುತ್ತಿದ್ದಾರೆ. ಕೋವಿಡ್ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ರಾಜ್ಯದಲ್ಲಿ ಈಗಲೂ ಕೊರೋನಾ 2ನೇ ಅಲೆ ಇದ್ದು, ಪರಿಸ್ಥಿತಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಕೆಸಿ ಜನರಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com