ರೇಖಾ ಕದಿರೇಶ್ ಹತ್ಯೆಯ ಹಿಂದೆ ಕುಟುಂಬಸ್ಥರ ಕೈವಾಡ?: ತನಿಖೆ ಮುಂದುವರಿಕೆ

ಕಳೆದ ಗುರುವಾರ ಹಾಡಹಗಲೇ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಐವರನ್ನು ಪೊಲೀಸರು ಬಂಧಿಸಿದ್ದು ಅವರ ತೀವ್ರ ವಿಚಾರಣೆ ಮುಂದುವರಿದಿದೆ.
ರೇಖಾ ಕದಿರೇಶ್-ಕದಿರೇಶ್(ಸಂಗ್ರಹ ಚಿತ್ರ)
ರೇಖಾ ಕದಿರೇಶ್-ಕದಿರೇಶ್(ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ ಗುರುವಾರ ಹಾಡಹಗಲೇ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಇದುವರೆಗೆ ಐವರನ್ನು ಪೊಲೀಸರು ಬಂಧಿಸಿದ್ದು ಅವರ ತೀವ್ರ ವಿಚಾರಣೆ ಮುಂದುವರಿದಿದೆ.

ಆರೋಪಿಗಳು ಪೊಲೀಸರು ವಿಚಾರಣೆ ನಡೆಸುತ್ತಿದ್ದಂತೆ ಒಂದೊಂದೇ ವಿಷಯಗಳನ್ನು ಬಾಯ್ಬಿಡುತ್ತಿದ್ದಾರೆ. ಸದ್ಯ ಕದಿರೇಶ್ ಕುಟುಂಬದವರ ಮೇಲೆ ಕಾಟನ್ ಪೇಟೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಲ್ಲಿ ಕದಿರೇಶ್ ಅಕ್ಕ ಮಾಲಾ ಮತ್ತು ಆಕೆಯ ಕುಟುಂಬಸ್ಥರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ.

25 ಲಕ್ಷಕ್ಕೆ ಡೀಲ್?: ಕದಿರೇಶ್ ನಿಧನ ನಂತರ ರೇಳಾ ಛಲವಾದಿಪಾಳ್ಯ ಪ್ರದೇಶದಲ್ಲಿ ರಾಜಕೀಯವಾಗಿ ಮೇಲುಗೈ ಸಾಧಿಸುತ್ತಿದ್ದುದನ್ನು ಕುಟುಂಬಸ್ಥರು ಸಹಿಸುತ್ತಿರಲಿಲ್ಲ. ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ರೇಖಾಗೆ ಟಿಕೆಟ್ ಸಿಗುವುದು ಬಹುತೇಕ ನಿಶ್ಚಯವಾಗಿತ್ತು. ಇದರಿಂದ ಕೆರಳಿದ್ದ ಮಾಲಾ ಮತ್ತು ಕುಟುಂಬಸ್ಥರು ಹಿಂದೆ ರೇಖಾಗೆ ನಿಕಟವರ್ತಿ ಹಾಗೂ ನಂಬಿಕಸ್ಥನಾಗಿದ್ದ ಪೀಟರ್ ನನ್ನು ಕರೆದು ಇಲ್ಲಸಲ್ಲದ್ದನ್ನು ಹೇಳಿಕೊಟ್ಟು ಛೂ ಬಿಟ್ಟದ್ದಳು ಎನ್ನಲಾಗುತ್ತಿದೆ.

ಇತ್ತ ಕದಿರೇಶ್ ನಿಧನ ನಂತರ ಕದಿರೇಶ್ ಕುಟುಂಬಸ್ಥರಿಗೆ ಹಣ ನೀಡುವುದನ್ನು ರೇಖಾ ನಿಲ್ಲಿಸಿದ್ದಳು. ರಾಜಕೀಯವಾಗಿ ಮೇಲೆ ಬರುತ್ತಿದ್ದ ರೇಖಾಳ ಜನಪ್ರಿಯತೆ ಆಕೆಯನ್ನು ಮುಗಿಸಲು ಮಾಲಾ, ಆಕೆಯ ಮಗ ಅರುಳ್, ಮಗಳು ಕಸ್ತೂರಿ ಮತ್ತು ಸೊಸೆ ಪೂರ್ಣಿಮಾ ಸ್ಕೆಚ್ ಹಾಕಿ ಪೀಟರ್ ಗೆ 25 ಲಕ್ಷಕ್ಕೆ ಹಣದ ಡೀಲ್ ಮಾಡಿಸಿದ್ದರು ಎಂದು ತನಿಖೆಯಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಮಾಲಾ ಮತ್ತು ಕುಟುಂಬಸ್ಥರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರೇಖಾ ಕದಿರೇಶ್ ಮರ್ಡರ್ ಸೀಕ್ರೇಟ್ ಇನ್ನಷ್ಟು ಹೊರಬರಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com