ಶಾಸಕರ ಕಚೇರಿಗೆ ಹೋಗಿ ಕೋವಿಡ್ ಲಸಿಕೆ ಪಡೆಯಲು ಹೇಳುತ್ತಿದ್ದಾರೆ: ರಾಜರಾಜೇಶ್ವರಿ ನಗರ ನಿವಾಸಿಗಳ ಗಂಭೀರ ಆರೋಪ

ಕೋವಿಡ್ ಲಸಿಕೆ ಪಡೆಯಲು ಇಚ್ಛಿಸುವವರು ಸ್ಥಳೀಯ ಶಾಸಕರ ಕಚೇರಿಗೆ ತೆರಳಿ ವೋಟರ್ ಐಡಿ ನೀಡಿ ಲಸಿಕೆ ಪಡೆಯುವಂತೆ ಆರೋಗ್ಯ ಸಿಬ್ಬಂದಿಗಳು ಹೇಳುತ್ತಿದ್ದಾರೆಂದು ರಾಜರಾಜೇಶ್ವರಿ ನಗರ ನಿವಾಸಿಗಳು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 
ಶಾಸಕರ ಕಚೇರಿಗೆ ಹೋಗಿ ಕೋವಿಡ್ ಲಸಿಕೆ ಪಡೆಯಲು ಹೇಳುತ್ತಿದ್ದಾರೆ: ರಾಜರಾಜೇಶ್ವರಿ ನಗರ ನಿವಾಸಿಗಳ ಗಂಭೀರ ಆರೋಪ

ಬೆಂಗಳೂರು: ಕೋವಿಡ್ ಲಸಿಕೆ ಪಡೆಯಲು ಇಚ್ಛಿಸುವವರು ಸ್ಥಳೀಯ ಶಾಸಕರ ಕಚೇರಿಗೆ ತೆರಳಿ ವೋಟರ್ ಐಡಿ ನೀಡಿ ಲಸಿಕೆ ಪಡೆಯುವಂತೆ ಆರೋಗ್ಯ ಸಿಬ್ಬಂದಿಗಳು ಹೇಳುತ್ತಿದ್ದಾರೆಂದು ರಾಜರಾಜೇಶ್ವರಿ ನಗರ ನಿವಾಸಿಗಳು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. 

ವಾರ್ಡ್ ನಂ.160ರಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ್ದೆ, ಆದರೆ, ಅಲ್ಲಿದ್ದ ಸಿಬ್ಬಂದಿಗಳು ಲಸಿಕೆ ದಾಸ್ತಾನು ಇಲ್ಲ ಎಂದು ಹೇಳಿದರು. ಬಳಿಕ ಲಸಿಕೆ ಪಡೆದುಕೊಳ್ಳಲು ಶಾಸಕರ ಕಚೇರಿಗೆ ತೆರಳಿ ಆಧಾರ್ ಹಾಗೂ ವೋಟರ್ ಐಡಿ ನೀಡಿ ಪಡೆದುಕೊಳ್ಳಿ ಎಂದು ಹೇಳಿದರು. ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಇದರಲ್ಲಿ ಏಕೆ ರಾಜಕೀಯ ಮಾಡುತ್ತಿದ್ದಾರೆಂದು ರಾಜರಾಜೇಶ್ವರಿ ನಗರದ ನಿವಾಸಿ ಶಾರದಮ್ಮ ಎಂಬುವವರು ಪ್ರಶ್ನಿಸಿದ್ದಾರೆ. 

ಬಿಬಿಎಂಪಿ ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವವರನ್ನು ಶಾಸಕರ ಕಚೇರಿಗೆ ಹೋಗುವಂತೆ ಮಾಡುತ್ತಿದ್ದಾರೆ. ಶಾಸಕ ಮುನಿರತ್ನ ಕಚೇರಿಯ ನೆಲಮಹಡಿಯಲ್ಲಿ ಲಸಿಕೆ ನೀಡಲಾಗುತ್ತಿದೆ. ಈ ಹಿಂದೆಯೂ ಈ ರೀತಿ ಮಾಡಲಾಗಿತ್ತು. ಬಳಿಕ ಸ್ಥಗಿತಗೊಳಿಸಿದ್ದರು. ಇದೀಗ ಮತ್ತೆ ಆರಂಭಿಸಿದ್ದಾರೆಂದು ಹೆಸರು ಬಹಿರಂಗಪಡಿಸಿದ ರಾಜರಾಜೇಶ್ವರಿ ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. 

ಲಸಿಕೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಂಗಳವಾರ ಲಸಿಕೆ ನೀಡಲು ಸಾಧ್ಯವಾಗಿರಲಿಲ್ಲ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಕೇಂದ್ರ ಸ್ಥಾನವಾಗಿದ್ದರಿಂದ ಹಾಗೂ ಲಸಿಕೆ ಪಡೆಯರು ಸೂಕ್ತ ಅನುಕೂಲಕರ ವಾತಾವರಣ ಇದ್ದ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಶಾಸಕರ ಕಚೇರಿಗೆ ತೆರಳಿ ಲಸಿಕೆ ಪಡೆದುಕೊಳ್ಳುವಂತೆ ಹೇಳಿದ್ದರು. ಯಾವುದೇ ಬಹಿರಂಗ ಪ್ರದೇಶದಲ್ಲಿ ಲಸಿಕೆ ನೀಡಬಹುದು ಸರ್ಕಾರ ಆದೇಶ ನೀಡಿದೆ. ಹೀಗಾಗಿ ಈ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಶಾಸಕ ಮುನಿರತ್ನ ಅವರು ಹೇಳಿದ್ದಾರೆ. 

ಕಳೆದ 2-3 ದಿನಗಳಿಂದ ನನ್ನ ಕಚೇರಿಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿರುವ ಜನರಿಗೆ ಮಾತ್ರ ಲಸಿಕೆ ನೀಡುವ ಉದ್ದೇಶದಿಂದ ವೋಟರ್ ಐಡಿ ಕೇಳಲಾಗಿತ್ತು. ಬೇರೆ ಕ್ಷೇತ್ರದ ಜನರು ಅವರ ಕ್ಷೇತ್ರದಲ್ಲಿ ಲಸಿಕೆ ಪಡೆದುಕೊಳ್ಳಲಿ ಎಂಬುದು ಇದರ ಉದ್ದೇಶವಾಗಿತ್ತು ಎಂದು ತಿಳಿಸಿದರು. 

ಇದೇ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಲಸಿಕೆ ದಾಸ್ತಾನು ಇಲ್ಲದ್ದಾಗ ನಿಮ್ಮ ಕಚೇರಿಯಲ್ಲಿ ಹೇಗೆ ಲಭ್ಯವಾಗುವಂತಾಯಿತು ಎಂಬ ಪ್ರಶ್ನೆಗೆ ಕೆಂಡಾಮಂಡಲಗೊಂಡ ಮುನಿರತ್ನ ಅವರು, ಈ ಬಗ್ಗೆ ಮಾಹಿತಿ ಬೇಕಿದ್ದರೆ, ಆರ್'ಟಿಐ ಮೂಲಕ ಮಾಹಿತಿ ಪಡೆದುಕೊಳ್ಳಲಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com