ಗುಂಡ್ಲುಪೇಟೆ: ಕೇರಳದಿಂದ ಬಂದು ತೀವ್ರ ಗಾಯಗೊಂಡಿದ್ದ ಹೆಣ್ಣುಹುಲಿ ಸೆರೆ
ಕೇರಳದಿಂದ ಕರ್ನಾಟಕಕ್ಕೆ ಬಂದು ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಬಂಡೀಪುರ ಸಂರಕ್ಷಿತಾರಣ್ಯದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
Published: 01st March 2021 12:29 PM | Last Updated: 01st March 2021 12:29 PM | A+A A-

ಸಂಗ್ರಹ ಚಿತ್ರ
ಚಾಮರಾಜನಗರ: ಕೇರಳದಿಂದ ಕರ್ನಾಟಕಕ್ಕೆ ಬಂದು ತೀವ್ರವಾಗಿ ಗಾಯಗೊಂಡಿದ್ದ ಹೆಣ್ಣು ಹುಲಿಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಬಂಡೀಪುರ ಸಂರಕ್ಷಿತಾರಣ್ಯದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಮೂಲಗಳ ಪ್ರಕಾರ ಜನವರಿ ತಿಂಗಳಲ್ಲಿ ಕೇರಳದ ವಯನಾಡು ಹುಲಿ ಸಂರಕ್ಷಿತ ಪ್ರದೇಶದಿಂದ ಬಂಡೀಪುರದತ್ತ ಬಂದಿದ್ದ ಗಾಯಗೊಂಡ ಹುಲಿಯನ್ನು ಬಂಡೀಪುರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾನುವಾರ ಗುಂಡ್ರೆ ವಲಯದಲ್ಲಿ ಸೆರೆ ಹಿಡಿದಿದ್ದಾರೆ. ಗುಂಡ್ರೆ ವಲಯದ ಕೇರಳ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗೆ ನಿತ್ರಾಣಗೊಂಡಿದ್ದ ಹೆಣ್ಣು ಹುಲಿ ಕಂಡು ಬಂತು. ಅದನ್ನು ಪರೀಕ್ಷಿಸಿದಾಗ, ಹುಲಿಯ ಕೊರಳಿಗೆ ಉರುಳು ಸುತ್ತಿಕೊಂಡು ಗಾಯಗೊಂಡಿರುವುದು ಖಚಿತವಾಯಿತು. ಕೇರಳದಿಂದ ತಪ್ಪಿಸಿಕೊಂಡು ಬಂದಿದ್ದ ಹುಲಿ ಇದುವೇ ಎಂದು ನಿರ್ಧರಿಸಿದ ಅಧಿಕಾರಿಗಳು, ಅದನ್ನು ಸೆರೆ ಹಿಡಿಯಲು ಬೋನು ಇಟ್ಟಿದ್ದರು. ಭಾನುವಾರ ಹುಲಿ ಬೋನಿಗೆ ಬಿದ್ದಿದೆ ಎನ್ನಲಾಗಿದೆ.
ಕೇರಳದ ವಯನಾಡು ಜಿಲ್ಲೆಯ ಕೊಲವಲ್ಲಿ ಪ್ರದೇಶದಲ್ಲಿ ಹುಲಿಯು ಆರ್ಎಫ್ಒ ಒಬ್ಬರ ಮೇಲೆ ದಾಳಿ ಮಾಡಿ ಬಂಡೀಪುರದತ್ತ ಬಂದಿತ್ತು. ಅದರ ಕೊರಳಿಗೆ ಉರುಳು ಸಿಕ್ಕಿಹಾಕಿಕೊಂಡು ಗಾಯವಾಗಿದ್ದನ್ನು ಕೇರಳದ ಅಧಿಕಾರಿಗಳು ದೃಢಪಡಿಸಿದ್ದರು. ಹುಲಿಯ ಮೇಲೆ ನಿಗಾ ಇಡುವಂತೆ ಅಲ್ಲಿನ ಅಧಿಕಾರಿಗಳು ಬಂಡೀಪುರ ಹುಲಿ ಯೋಜನೆ ನಿರ್ದೇಶಕರಿಗೆ ಮನವಿಯನ್ನೂ ಮಾಡಿದ್ದರು.
ಇನ್ನು ಸೆರೆಯಾದ ಹುಲಿಯನ್ನು ಪರಿಶೀಲಿಸಿದ ಅಧಿಕಾರಿಗಳು, 'ಹುಲಿಯ ವಯಸ್ಸು 8ರಿಂದ 10 ವರ್ಷ ಇರಬಹುದು ಎಂದು ಅಂದಾಜಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, 'ಹುಲಿಯನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಲಯದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುಲಿಯ ಕತ್ತಿನ ಸುತ್ತಲೂ ಆಗಿರುವ ಗಾಯದಲ್ಲಿ ಉರುಳು ಕಂಡುಬಂದಿದ್ದು ವೈದ್ಯರು ಅದನ್ನು ಕತ್ತರಿಸಿದ್ದಾರೆ. ಗಾಯದಲ್ಲಿ ಹುಳುವಾಗಿದ್ದು, ಪುನರ್ವಸತಿ ವೈದ್ಯರು ಮತ್ತು ಬಂಡೀಪುರದ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಹುಲಿಯ ಉಗುರು ಮತ್ತು ಕೋರೆ ಹಲ್ಲುಗಳು ಹಾಗೆಯೇ ಇವೆಯಾದರೂ, ಅವುಗಳು ದುರ್ಬಲಗೊಂಡಿವೆ. ಹುಲಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ. ಪ್ರಸ್ತುತ ಹುಲಿಯನ್ನು ಈ ಸ್ಥಿತಿಯಲ್ಲಿ ಕಾಡಿಗೆ ಬಿಡುವುದು ಸಾಧ್ಯವಿಲ್ಲ. ಅದು ಅದರ ಪ್ರಾಣಕ್ಕೆ ಎರವಾಗುತ್ತದೆ. ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಹುಲಿಯ ಆರೋಗ್ಯ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.