ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ: ಕೆಲಕಾಲ ಗೊಂದಲ ಸೃಷ್ಟಿ
ರಾಜ್ಯದಾದ್ಯಂತ ಮೂರನೇ ಹಂತದ ಕೊರೋನಾ ಲಸಿಕೆ ಅಭಿಯಾನ ಸೋಮವಾರ ಆರಂಭಗೊಂಡಿದ್ದು, ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
Published: 02nd March 2021 09:44 AM | Last Updated: 02nd March 2021 09:44 AM | A+A A-
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯದಾದ್ಯಂತ ಮೂರನೇ ಹಂತದ ಕೊರೋನಾ ಲಸಿಕೆ ಅಭಿಯಾನ ಸೋಮವಾರ ಆರಂಭಗೊಂಡಿದ್ದು, ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ 60 ವರ್ಷದ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ 45-59 ವರ್ಷದೊಳಗಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ.
ಮೂರನೇ ಹಂತದ ಲಸಿಕೆ ಅಭಿಯಾನ ನಿನ್ನೆ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿತ್ತು. ಕೋವಿನ್ ಪೋರ್ಟಲ್ ಮತ್ತು ಆರೋಗ್ಯ ಸೇತು ಆ್ಯಪ್ ಗಳು ಸಾರ್ವಜನಿಕರ ನೋಂದಣಿಗೆ ತೆರೆದುಕೊಂಡಿತ್ತು. ಮಧ್ಯಾಹ್ನ 12 ಗಂಟೆಯಿಂದ ಲಸಿಕೆ ನೀಡಲು ಅವಕಾಶ ಕಲ್ಪಿಸಲಾಗಿತ್ತು.
ಕೂಡಲೇ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿದ್ದವರು ಸಮೀಪದ ಲಸಿಕಾ ಕೇಂದ್ರಗಳ ಆಯ್ಕೆಯೊಂದಿಗೆ ಹೆಸರು ನೋಂದಣಿಗೆ ಮಾಡಿಕೊಂಡು ಉತ್ಸಾಹದಿಂದ ಆಸ್ಪತ್ರೆಗಳಿಗೆ ಆಗಮಿಸಿದ್ದರು. ಕೆಲವರು ನೇರವಾಗಿ ಆಸ್ಪೆತ್ರೆಯಲ್ಲಿಯೇ ನೋಂದಣಿ ಮಾಡಿಕೊಳ್ಳಲು ಬಂದಿದ್ದರು. ಈ ವೇಳೆ ತಾಂತ್ರಿಕ ಸಮಸ್ಯೆಯಿಂದ ಸಕಾಲದಲ್ಲಿ ಲಸಿಕೆ ಪಡೆಯಲಾಗದೆ ಪರದಾಡಿದ್ದರು.
ಇನ್ನು ನಗರ ಪ್ರದೇಶಗಳಲ್ಲಿ ನೇರವಾಗಿ ಆಸ್ಪತ್ರೆಗೆ ಬಂದರೆ ನೋಂದಣಿಗೆ ಅವಕಾಶವಿಲ್ಲ ಎಂದು ಮೊದಲೇ ಹೇಳಲಾಗಿತ್ತು. ಈ ಬಗ್ಗೆ ಮಾಹಿತಿ ಇಲ್ಲದೆ ನೇರವಾಗಿ ಆಗಮಿಸಿದ್ದ ಕೆಲ ಜನರು ಕೆ.ಸಿ.ಜನರಲ್, ಸಿವಿ ರಾಮನ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಜೊತೆ ವಾಗ್ವಾದಕ್ಕೆ ಇಳಿದಿದ್ದರು. ಇಳಿದಂತೆ ಬಹುತೇಕ ಆಸ್ಪತ್ರೆಗಳಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾಗಿ, ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡು ಬಂದಿದ್ದ ಹಿರಿಯ ನಾಗರೀಕರು ಹಾಗೂ ನಾನಾ ಆರೋಗ್ಯ ಸಮಸ್ಯೆ ಹೊಂದಿದ್ದವರು ಲಸಿಕೆ ಪಡೆಯದೆ ಮನೆಗಳಿಗೆ ತೆರಳಿದರು.
ಹಲವು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದೇನೆ. ಮೂರನೇ ಹಂತದ ಲಸಿಕೆ ಅಭಿಯಾನ ಆರಂಭವಾಗಿದೆ ಎಂಬ ಮಾಹಿತಿ ತಿಳಿಯುತ್ತಿದಂತೆಯೇ ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಕೇಂದ್ರಕ್ಕೆ ತೆರಳಿದ್ದೆ. ಬಳಿಕ ವಾಣಿ ವಿಲಾಸ ಆಸ್ಪತ್ರೆಗೆ ತೆರಳುವಂತೆ ಅಲ್ಲಿನ ಸಿಬ್ಬಂದಿಗಳು ಸೂಚಿಸಿದರು. ವಾಣಿವಿಲಾಸ ಆಸ್ಪತ್ರೆಗೆ ತೆರಳಿದಾಗ ಕಾಯುವಂತೆ ತಿಳಿಸಿ ಗಂಟೆಗಟ್ಟಲೆ ಕೂರಿಸಿದರು, ಬಳಿಕ ನನ್ನ ಪುತ್ರನ ಸಹಾಯಗೊಂದಿಗೆ ಕೋವಿನ್ ಆ್ಯಪ್ ನಲ್ಲಿ ಹೆಸರು ನೋಂದಾವಣಿ ಮಾಡಿಕೊಂಡೆ. ಕೋವಿನ್ ಆ್ಯಪ್ ನಲ್ಲಿ ಮಲ್ಲಿಗೆ ಆಸ್ಪತ್ರೆಯಲ್ಲಿ ಲಸಿಕೆ ನೀಡುವುದಾಗಿ ಮಾಹಿತಿ ನೀಡಲಾಗಿತ್ತು. ಮಲ್ಲಿಗೆ ಆಸ್ಪತ್ರೆಗೆ ತೆರಳಿದಾಗ ಅಲ್ಲಿನ ಸಿಬ್ಬಂದಿಗಳು ಫೋನ್ ನಂಬರ್ ನೀಡಿ ಹೋಗುವಂತೆ ತಿಳಿಸಿದರು. ಅಲ್ಲಿ ಸಿಬ್ಬಂದಿಗಳು ಲಸಿಕೆ ನೀಡಲು ಯಾವುದೇ ಸಿದ್ಧತೆಗಳನ್ನೂ ಮಾಡಿಕೊಂಡಿರಲಿಲ್ಲ. ಕೆಸಿ ಜನರಲ್ ಆಸ್ಪತ್ರೆಗೆ ತೆರಳಿದರೂ ಅಲ್ಲಿಯೂ ಕಾಯುವಂತೆ ತಿಳಿಸಿದರು. ಲಸಿಕೆ ವಿತರಣೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ವಿಫಲವಾಗಿದೆ. ಸಿದ್ಧತೆಗಳನ್ನು ಸರಿಯಾಗಿ ನಡೆಸಿಲ್ಲ ಎಂದಾದರೆ ಮಾರ್ಚ್ 1 ರಿಂದ ಲಸಿಕೆ ಅಭಿಯಾನವನ್ನೇಕೆ ಆರಂಭಿಸಬೇಕಿತ್ತು. ಬಿರು ಬಿಸಿಲಿನಲ್ಲಿ ವಯಸ್ಸಾದವರನ್ನು ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡಿಸುವುದು ಎಷ್ಟು ಸರಿ? ಎಂದು 68 ವರ್ಷದ ವೃದ್ಧ ಸತ್ಯಾನಾಥ ಕೃಷ್ಣಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿರುವ ದಂತ ಶಸ್ತ್ರಚಿಕಿತ್ಸಕ ಡಾ.ಎಂ.ಎಸ್.ಆನಂದ್ ಅವರು ಮಾತನಾಡಿ, ಲಸಿಕೆ ಪಡೆದುಕೊಳ್ಳಲು ಆನ್'ಲೈನ್ ಮೂಲಕ ಹೆಸರು ನೋಂದಣಿ ಮಾಡಿಕೊಂಡಿದ್ದೆ. ನೋಂದಣಿ ಮಾಡಿಕೊಂಡಿದ್ದರೂ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಕಾಯಬೇಕಾಯಿತು ಎಂದು ಹೇಳಿದ್ದಾರೆ.