ರಾಜಧಾನಿ ಬೆಂಗಳೂರು ಮಹಾನಗರಿಗೆ ತ್ರಿಬಲ್ ಶಾಕ್; ಹಾಲು, ಆಟೋ, ಬಸ್ ದರ ಏರಿಕೆ!

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಮತ್ತೆ ಮೂರು ಶಾಕ್ ಗಳು ಕಾದಿದ್ದು, ಶೀಘ್ರದಲ್ಲೇ ಮಹಾನಗರಿಯಲ್ಲಿ ಹಾಲು, ಆಟೋ ಮತ್ತು ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ.

Published: 02nd March 2021 09:30 AM  |   Last Updated: 02nd March 2021 12:50 PM   |  A+A-


KMF-Milk Price

ಸಂಗ್ರಹ ಚಿತ್ರ

Posted By : Srinivasamurthy VN
Source : The New Indian Express

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆಯಿಂದಾಗಿ ಹೈರಾಣಾಗಿರುವ ಸಿಲಿಕಾನ್ ಸಿಟಿ ಬೆಂಗಳೂರು ಜನತೆಗೆ ಮತ್ತೆ ಮೂರು ಶಾಕ್ ಗಳು ಕಾದಿದ್ದು, ಶೀಘ್ರದಲ್ಲೇ ಮಹಾನಗರಿಯಲ್ಲಿ ಹಾಲು, ಆಟೋ ಮತ್ತು ಬಸ್ ದರ ಏರಿಕೆಯಾಗುವ ಸಾಧ್ಯತೆ ಇದೆ.

ಹೌದು.. ಈಗಾಗಲೇ ಆಟೋ ಮತ್ತು ಬಿಎಂಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದರ ನಡುವೆಯೇ ಹಾಲಿನ ದರ ಏರಿಕೆಗೂ ಕೆಎಂಎಫ್ ನಿರ್ಧರಿಸಿದೆ. ಈ ಹಿಂದೆ ರಾಜ್ಯ ಸರ್ಕಾರ ಟ್ಯಾಕ್ಸಿ ದರವನ್ನು ಪರಿಷ್ಕರಿಸಿತ್ತು. ಮೊದಲ 4 ಕಿ.ಮೀ. ಗೆ ಹವಾನಿಯಂತ್ರಿತವಲ್ಲದ ಕಾರುಗಳಗಳ ದರ 75 ರೂ. ಮತ್ತು ಹವಾನಿಯಂತ್ರಿತ ಕ್ಯಾಬ್‌ಗಳ ದರ 100 ರೂ. ಎಂದು ದರ ಪರಿಷ್ಕರಣೆ ಮಾಡಿತ್ತು. ಅಂತೆಯೇ ಎಸಿ ಕ್ಯಾಬ್‌ಗಳಿಗೆ ಪ್ರತೀ ಕಿಲೋಮೀಟರಿಗೆ 24 ರೂ. ಮತ್ತು ಎಸಿ ಅಲ್ಲದ ಟ್ಯಾಕ್ಸಿಗಳಿಗೆ 18 ರೂ. ದರ ನಿಗದಿ ಮಾಡಿತ್ತು. ಇದೀಗ ಅದೇ ರೀತಿಯಲ್ಲೇ ಆಟೋ ಮತ್ತು ಬಸ್ ಟಿಕೆಟ್ ದರ ಹೆಚ್ಚಳಕ್ಕೂ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಎಸಿ ಮತ್ತು ಎಸಿ ರಹಿತ ಬಸ್‌ಗಳ ಟಿಕೆಟ್ ದರವನ್ನುಶೇ.18-20ರಷ್ಟು ಹೆಚ್ಚಿಸಲು ಸಾರಿಗೆ ನಿಗಮವು ಪ್ರಸ್ತಾಪಿಸಿದೆ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಮತ್ತು ಕೋವಿಡ್ ಕಾರಣದಿಂದಾಗಿ ಬಿಎಂಟಿಸಿಯು ಆದಾಯ ನಷ್ಟವನ್ನು ಅನುಭವಿಸುತ್ತಿದೆ. ಹೀಗಾಗಿ ನಾವು ದರ ಹೆಚ್ಚಳವನ್ನು ಬಯಸುತ್ತಿದ್ದೇವೆ. ನಾವು ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ಈ ಕುರಿತಾಗಿ ಸಂಪರ್ಕಿಸಿದ್ದೇವೆ. ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ಅವರು ದರ ಏರಿಕೆ ಕುರಿತು ಸಿಎಂ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು. 

ಇನ್ನು ಇದೇ ವಾರ ರಾಜ್ಯ ಬಜೆಟ್ ಘೋಷಣೆಯಾಗಲಿದ್ದು, ಬಜೆಟ್ ಘೋಷಣೆ ಬಳಿಕ ಸರ್ಕಾರ ಈ ದರ ಏರಿಕೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು, ಪ್ರಸ್ತುತ ಬಿಎಂಟಿಸಿ ದರವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿಲ್ಲ ಎಂದು ಹೇಳಿದ್ದಾರೆ. 

ಇನ್ನು ಆಟೊರಿಕ್ಷಾ ದರ ಏರಿಕೆ ಕುರಿತಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಮಾತನಾಡಿ, ಎಲ್‌ಪಿಜಿ ಬೆಲೆ ಏರಿಕೆಯಾಗಿರುವುದರಿಂದ ಚಾಲಕರ ಸಂಘಗಳು ಮೊದಲ 2 ಕಿ.ಮೀ.ಗೆ ಪ್ರಸ್ತುತ ಶುಲ್ಕವನ್ನು 25 ರೂ.ನಿಂದ 36 ರೂ.ಗೆ ಹೆಚ್ಚಿಸಲು ಬಯಸುತ್ತಿವೆ. ಈ ಕುರಿತು ಶೀಘ್ರದಲ್ಲೇ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಹಾಲು ಬೆಲೆ ಏರಿಕೆ ಅನಿವಾರ್ಯ: ಕೆಎಂಎಫ್
ಇನ್ನು ಆಟೋ  ಬಸ್ ಮಾತ್ರವಲ್ಲದೇ ಹಾಲಿನ ದರ ಕೂಡ ಏರಿಕೆಯಾಗಲಿದ್ದು, ಈ ಬಗ್ಗೆ ಕೆಎಂಎಫ್ ಕೂಡ ಮಾಹಿತಿ ನೀಡಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಹೇಳಿರುವ ಕೆಎಂಎಫ್, ಶೀಘ್ರದಲ್ಲೇ ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇವೆ. ಆ ಬಳಿಕ ದರ ಏರಿಕೆಯ ನಿಖರ ಪ್ರಮಾಣ ತಿಳಿಸುತ್ತೇವೆ ಎಂದು ಹೇಳಿದ್ದಾರೆ.  ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) 14 ಹಾಲು ಒಕ್ಕೂಟಗಳನ್ನು ಹೊಂದಿದೆ ಮತ್ತು ಪ್ರತಿಯೊಂದೂ ರೈತರಿಗೆ ವಿಭಿನ್ನ ಖರೀದಿ ದರವನ್ನು ನೀಡುತ್ತದೆ. ಡೈರಿ ರೈತರಿಗೆ ಪ್ರಸ್ತುತ ಪ್ರತೀ ಲೀಟರ್ ಹಾಲಿಗೆ 31 ರೂ.ಯಿಂದ 34 ರೂ.ಗಳವರೆಗೂ ದರ ನೀಡಲಾಗುತ್ತಿದೆ. ಈ ದರವನ್ನು ಲೀಟರ್‌ಗೆ 40 ರೂ.ಗೆ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.

ಇದೇ ವಿಚಾರವಾಗಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, 'ಒಕ್ಕೂಟಗಳು ನಷ್ಟದಲ್ಲಿದೆ ಮತ್ತು ಕೋವಿಡ್‌ನಿಂದಾಗಿ ರೈತರು ಕೂಡ ಸಂಕಷ್ಟದಲ್ಲಿದ್ದಾರೆ. 2020 ರಲ್ಲಿ ನಾವು ಹಾಲಿನ ಬೆಲೆಯನ್ನು ಲೀಟರ್ ಹಾಲಿಗೆ 35 ರೂ.ನಿಂದ 37 ರೂ.ಗೆ ಮತ್ತು ಮೊಸರಿಗೆ 39 ರೂ.ಗೆ 41 ರೂ.ಗೆ ಹೆಚ್ಚಿಸಿದ್ದೇವೆ. ಸಂಘಗಳು ನಿಗದಿತ ಖರೀದಿ ಬೆಲೆಯನ್ನು ನೀಡಿದರೆ, ಸರ್ಕಾರವು ಹೆಚ್ಚುವರಿ ಪ್ರೋತ್ಸಾಹವನ್ನು ನೀಡುತ್ತದೆ. ಉದಾಹರಣೆಗೆ, ಬೆಂಗಳೂರು ನಗರ ಹಾಲು ಒಕ್ಕೂಟವು ಪ್ರತಿ ಲೀಟರ್‌ಗೆ 26 ರೂ., ಸರ್ಕಾರ 5 ರೂ. ನೀಡುತ್ತದೆ. ಸರ್ಕಾರಕ್ಕೆ ಪ್ರೋತ್ಸಾಹಧನ ನೀಡಲು ಪ್ರತೀ ತಿಂಗಳು 100 ಕೋಟಿ ರೂಗಳು ಬೇಕಾಗುತ್ತದೆ. ಹೀಗಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಮೂಲಗಳ ಪ್ರಕಾರ ಪ್ರತೀ ಲೀಟರ್ ಹಾಲಿಗೆ 2ರಿಂದ 3ರೂ ಏರಿಕೆ ಮಾಡಲು ಕೆಎಂಎಫ್ ಗಂಭೀರ ಚಿಂತನೆಯಲ್ಲಿದೆ ಎಂದು ಹೇಳಲಾಗಿದೆ. 


Stay up to date on all the latest ರಾಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp