
ಮನೆಯಲ್ಲಿಯೇ ಲಸಿಕೆ ಪಡೆದ ಬಿಸಿ ಪಾಟೀಲ್
ನವದೆಹಲಿ: ಕೃಷಿ ಸಚಿವ ಬಿಸಿ ಪಾಟೀಲ್ ಆಸ್ಪತ್ರೆಗೆ ತೆರಳದೆ ಮನೆಯಲ್ಲಿ ಕೊರೋನಾ ಲಸಿಕೆ ಪಡೆದ ಸಂಬಂಧ ವರದಿ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಕೃಷಿ ಸಚಿವ ಬಿಸಿ ಪಾಟೀಲ್ ಮಂಗಳವಾರ ತಮ್ಮ ಮನೆಯಲ್ಲಿಯೇ ಲಸಿಕೆ ಪಡೆದಿದ್ದಕ್ಕೆ ಆರೋಗ್ಯ ಸಚಿವ ಕೆ. ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರು ಕೂಡ ಮನೆಯಲ್ಲಿ ಲಸಿಕೆ ಪಡೆಯಬಾರದು, ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕು ಎಂದು ಹೇಳಿದ್ದಾರೆ.
ಬಿಸಿ ಪಾಟೀಲ್ ಮತ್ತು ಅವರ ಪತ್ನಿವನಜಾ ಹಿರೆಕೆರೂರಿನ ತಮ್ಮ ಮನೆಯಲ್ಲಿಯೇ ವೈದ್ಯರನ್ನು ಕರೆಸಿ ಲಸಿಕೆ ಪಡೆದಿದ್ದರು. ಆದರೆ ಇದು ಮಾರ್ಗಸೂಚಿಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಇದಾದ ನಂತರ ಟ್ವೀಟ್ ಮಾಡಿದ್ದ ಬಿಸಿ ಪಾಟೀಲ್, ನಾನು ನನ್ನ ಪತ್ನಿ ಜೊತೆ ಲಸಿಕೆ ತೆಗೆದುಕೊಂಡಿದ್ದೇನೆ, ಆದರೆ ಇದನ್ನೆ ಕೆಲವರು ಟಾರ್ಗೆಟ್ ಮಾಡಿದ್ದಾರೆ, ತಪ್ಪು ಸಂದೇಶ ರವಾನಿಸುತ್ತಿದ್ದಾರೆ, ನಾನು ಯಾವುದೇ ಅಪರಾಧ ಮಾಡಿಲ್ಲ ಎಂದು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಆಸ್ಪತ್ರೆಗೆ ಹೋದರೆ ಅಲ್ಲಿರುವ ಜನರಿಗೆ ತೊಂದರೆ ಆಗುತ್ತದೆ ಎಂಬ ದೃಷ್ಟಿಯಿಂದ ನಾನು ಆಸ್ಪತ್ರೆಗೆ ಹೋಗಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಇಲಾಖೆ ಸಿಬ್ಬಂದಿ ಮನೆಗಳಿಗೆ ಹೋಗಿ ಲಸಿಕೆ ನೀಡುವಂತಿಲ್ಲ. ಎಷ್ಟು ತುರ್ತು ಪರಿಸ್ಥಿತಿ ಇದ್ದರೂ ಮನೆಗೆ ಹೋಗಲು ನಿಯಮಗಳಲ್ಲಿ ಅವಕಾಶವಿಲ್ಲ. ಲಸಿಕೆ ಹಾಕಬೇಕಾದ ಅನಿವಾರ್ಯತೆ ಇದ್ದರೆ ಮೊದಲೇ ಅನುಮತಿ ಪಡೆಯಬೇಕು ಎಂದು ಹೇಳಿದ್ದಾರೆ.
ಬಿ.ಸಿ.ಪಾಟೀಲ್ ಅವರಿಗೆ ಲಸಿಕೆ ನೀಡಿರುವುದರಲ್ಲಿ ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ. ಲಸಿಕೆ ಪಡೆಯುವವರು ಆಸ್ಪತ್ರೆಗೆ ಬಂದು ಪಡೆದರೆ ಯಾವುದೇ ಅನಾರೋಗ್ಯ ಸಮಸ್ಯೆ ಉಂಟಾದರೂ ತಕ್ಷಣ ಚಿಕಿತ್ಸೆ ಪಡೆಯಬಹುದು. ಹೀಗಾಗಿ ಮನೆಗಳಲ್ಲಿ ಲಸಿಕೆ ಪಡೆಯುವುದು ಸೂಕ್ತವಲ್ಲ. ಈ ಬಗ್ಗೆ ವಿವರಣೆ ಕೇಳಿದ್ದು, ಸೂಕ್ತ ವಿವರಣೆ ನೀಡದಿದ್ದರೆ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗುವುದು ಎಂದರು.