ಜಾರಕಿಹೊಳಿ ರಾಜೀನಾಮೆ: ಸ್ವಕ್ಷೇತ್ರ ಗೋಕಾಕ್ ನಲ್ಲಿ ಬೆಂಬಲಿಗರ ಆಕ್ರೋಶ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ
ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸೆಕ್ಸ್ ಸಿಡಿ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಅವರ ಸ್ವಕ್ಷೇತ್ರ ಬೆಳಗಾವಿಯ ಗೋಕಾಕ್ ನಲ್ಲಿ ಬೆಂಬಲಿಗರ ಆಕ್ರೋಶ, ಪ್ರತಿಭಟನೆ ಮುಗಿಲುಮುಟ್ಟಿದೆ.
Published: 03rd March 2021 03:41 PM | Last Updated: 03rd March 2021 03:58 PM | A+A A-

ಸೀಮೆಎಣ್ಣೆ ಸುರಿದುಕೊಂಡ ರಮೇಶ್ ಜಾರಕಿಹೊಳಿ ಅಭಿಮಾನಿ
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸೆಕ್ಸ್ ಸಿಡಿ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಅವರ ಸ್ವಕ್ಷೇತ್ರ ಬೆಳಗಾವಿಯ ಗೋಕಾಕ್ ನಲ್ಲಿ ಬೆಂಬಲಿಗರ ಆಕ್ರೋಶ, ಪ್ರತಿಭಟನೆ ಮುಗಿಲುಮುಟ್ಟಿದೆ.
ಗೋಕಾಕ್ ನ ಬಸವೇಶ್ವರ ವೃತ್ತದಲ್ಲಿ ಇಂದು ಮಧ್ಯಾಹ್ನ ಹೈಡ್ರಾಮಾ ನಡೆದಿದ್ದು ರಮೇಶ್ ಜಾರಕಿಹೊಳಿ ಅಭಿಮಾನಿಗಳು ಅಯ್ಯಯ್ಯೋ ಅನ್ಯಾಯ ಎನ್ನುತ್ತಾ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ತಮ್ಮ ನೆಚ್ಚಿನ ನಾಯಕನ ಪರವಾಗಿ ಬೆಂಬಲಿಗರು ಪ್ರತಿಭಟನೆ ಮಾಡಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳು ರಾಜೀನಾಮೆ ಅಂಗೀಕರಿಸಬಾರದು ಎಂದು ಗೋಕಾಕ್ ನಗರದಲ್ಲಿ ಡಿ ಆರ್ ವ್ಯಾನ್ ಮುಂದೆ ನಿಂತು ವಾಹನಗಳಿಗೆ ಹೋಗಲು ಬಿಡದೆ ತಡೆಯೊಡ್ಡುತ್ತಿರುವ ದೃಶ್ಯ ಕಂಡುಬಂತು. ಕೆಲವರು ಮೈಮೇಲೆ ಎಣ್ಣೆ ಸುರಿದು ಪ್ರತಿಭಟನೆ ಮಾಡಿದರು. ಈ ವೇಳೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು. ಟೈಯರ್ ಗೆ ಬೆಂಬಲಿಗರು ಬೆಂಕಿ ಹಚ್ಚಿದರು.ಗೋಕಾಕ್ ನ ಬೀದಿ ಬೀದಿಗಳಲ್ಲಿ ಬೆಂಬಲಿಗರು ತಿರುಗಾಡಿ ಅಂಗಡಿ ಬಂದ್ ಮಾಡಿಸುತ್ತಿದ್ದ ದೃಶ್ಯ ಕಂಡುಬಂತು.
Tension in Gokak after WRD Minister Ramesh Jarkiholi resigned from the cabinet. His supporter attempted self immolation dousing kerosene on him. @XpressBengaluru @santwana99 @RameshJarkiholi @BSBommai @allaboutbelgaum @HelloGokak pic.twitter.com/OHTmrauc25
— Naushad Bijapur (@naushadbijapur) March 3, 2021
ನಿನ್ನೆ ಸಾಯಂಕಾಲ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಈ ಪ್ರಕರಣ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ತೀವ್ರ ಮುಜುಗರವನ್ನುಂಟುಮಾಡಿದ್ದರೆ ಬಜೆಟ್ ಅಧಿವೇಶನ ಹೊಸ್ತಿಲಿನಲ್ಲಿ ಪ್ರತಿಪಕ್ಷಗಳಿಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹೊಸ ಅಸ್ತ್ರ ಸಿಕ್ಕಿದೆ. ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ಸತತವಾಗಿ ರಾಜ್ಯ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಟೀಕಿಸುತ್ತಲೇ ಬಂದಿದೆ.
ನಿನ್ನೆ ಸಾಯಂಕಾಲದಿಂದ ಪ್ರತಿಪಕ್ಷ ನಾಯಕರು ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಪಟ್ಟು ಹಿಡಿದಿದ್ದರು. ಹಲವೆಡೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.
ನಾನು ಯಾವ ತಪ್ಪೂ ಮಾಡಿಲ್ಲ, ಅದು ನಾನಲ್ಲ, ನನ್ನ ಬಗ್ಗೆ ನಕಲಿ ಸಿಡಿ ಸೃಷ್ಟಿಸಿ ರಾಜಕೀಯವಾಗಿ ನನ್ನ ಜೀವನವನ್ನು ಹಾಳು ಮಾಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ನಿನ್ನೆ ಹೇಳಿದ್ದ ರಮೇಶ್ ಜಾರಕಿಹೊಳಿ ಇಂದು ನೈತಿಕ ಹೊಣೆ ಹೊತ್ತು ಪಕ್ಷಕ್ಕೆ ಮುಜುಗರವಾಗದಿರಲಿ ಎಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದರು.
ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಪಕ್ಷದ ಹೈಕಮಾಂಡ್ ನಿಂದ ಸೂಚನೆ ಬಂದಿತ್ತು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿ ಅವರು ರಾಜ್ಯಪಾಲರಿಗೆ ರವಾನಿಸಿ ರಾಜ್ಯಪಾಲರು ಕೂಡ ಅದಕ್ಕೆ ಸಹಿ ಹಾಕಿಯಾಗಿದೆ. ಇದೀಗ ರಮೇಶ್ ಜಾರಕಿಹೊಳಿ ಮಾಜಿ ಸಚಿವರಾಗಿದ್ದಾರೆ.