ಯುವತಿಯನ್ನು ಸಂತ್ರಸ್ತೆ ಎನ್ನಬೇಡಿ, ಇದೊಂದು ನಕಲಿ ಸಿಡಿ: ರಾಸಲೀಲೆ ಪ್ರಕರಣ ಸಿಬಿಐ ತನಿಖೆಗೆ ಬಾಲಚಂದ್ರ ಜಾರಕಿಹೋಳಿ ಆಗ್ರಹ
ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿಯನ್ನು ಸಂತ್ರಸ್ತೆ ಎಂದು ಕಎಯಬೇಡಿ, ಇದರ ಹಿಂದೆ ಷಡ್ಯಂತ್ರವಿದೆ ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
Published: 07th March 2021 05:50 PM | Last Updated: 07th March 2021 05:50 PM | A+A A-

ಬಾಲಚಂದ್ರ ಜಾರಕಿಹೋಳಿ
ಬೆಂಗಳೂರು: ವಿಡಿಯೋದಲ್ಲಿ ಕಾಣಿಸಿಕೊಂಡ ಯುವತಿಯನ್ನು ಸಂತ್ರಸ್ತೆ ಎಂದು ಕಎಯಬೇಡಿ, ಇದರ ಹಿಂದೆ ಷಡ್ಯಂತ್ರವಿದೆ ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
ರಾಸಲೀಲೆ ಸಿಡಿ ಪ್ರಕರಣದ ಸಂಬಂಧ ದೂರುದಾರ ದಿನೇಶ್ ಕಲ್ಲಹಳ್ಳಿ ದೂರು ಹಿಂಪಡೆಯಲು ತೀರ್ಮಾನಿಸಿದ ಬೆನ್ನಲ್ಲೇ ರಮೇಶ್ ಜಾರಕಿಹೋಳಿ ಸೋದರ ಬಾಲಚಂದ್ರ ಜಾರಕಿಹೋಳಿ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ.
ಸುದ್ದಿಗೋಷ್ಠಿ ವೇಳೆ ಮಾತನಾಡಿದ ಬಾಲಚಂದ್ರ ಜಾರಕಿಹೋಳಿ "ದಿನೇಶ್ ಕಲ್ಲಹಳ್ಳಿ ದೂರು ನೀಡುವ ಮುನ್ನವೇ ವಿಡಿಯೋ ಬಿಡುಗಡೆ ಮಾಡಿದ್ದರು.ಇದಕ್ಕಾಗಿ ಹದಿನೈದರಿಂದ ಹದಿನೇಳು ಕೋಟಿ ನೀಡಿ ಸರ್ವರ್ ಖರೀದಿಸಲಾಗಿದೆ.ಬಳಿಕ ನಕಲಿ ಸಿಡಿ ಬಿಡುಗಡೆ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ.
"ಪ್ರಕರಣದಲ್ಲಿ ಯುವತಿಯೇ ಮೊದಲ ಆರೋಪಿಯಾಗಿದ್ದು ಆಕೆಯ ಹಿಂದೆ ಮತ್ತೆ ನಾಲ್ವರು ಇದ್ದಾರೆ.ರಮೇಶ್ ಜಾರಕಿಹೋಳಿಯವರನ್ನು ಸಚಿವ ಸ್ಥಾನದಿಂದ ಇಳಿಸುವ ಉದ್ದೇಶವೇ ಇವರದ್ದಾಗಿತ್ತು" ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
"ಅಧಿಕಾರ ಇಂದಿದ್ದು ನಾಳೆ ಹೋಗುವುದು, ಆದರೆ ಮರ್ಯಾದೆ ಒಮ್ಮೆ ಹೋದರೆ ಮತ್ತೆ ಬರಲ್ಲ, ಸಿಡಿ ನಾನು ಇದುವರೆಗೆ ನೋಡಿಲ್ಲ. ಪ್ರಕರಣ ಹನಿಟ್ರ್ಯಾಪ್ ಆರೋಪದಲ್ಲಿ ಕೊನೆಗಾಣಲಿದೆ. ಇದರ ಹಿಂದೆ ಕಾಣದ ಕೈಗಳಿದ್ದು ಬಿಜೆಪಿ ಹಾಗೂ ಜಾರಕಿಹೋಳಿ ಕುಟುಂಬಕ್ಕೆ ಮುಜುಗರ ತರುವುದು ಇದರ ಉದ್ದೇಶ.ಇದಕ್ಕೆಂದೇ ದಿನೇಶ್ ಕಲ್ಲಹಳ್ಳಿಯವರನ್ನು ಸಹ ದಿಕ್ಕು ತಪ್ಪಿಸಿದ್ದಾರೆ" ಎಂದು ಬಾಲಚಂದ್ರ ಜಾರಕಿಹೋಳಿ ಹೇಳಿದ್ದಾರೆ.
"ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಇಂದು ನಾನು ಶಾಸಕ ರಮೇಶ್ ಜಾರಕಿಹೋಳಿಯವರನ್ನು ಭೇಟಿಯಾಗಿ ಮನೆಯಿಂದ ಹೊರಬಂದು ದೂರು ನೀಡಲು ಮನವಿ ಮಾಡುತ್ತೇನೆ ಎಂದ ಬಾಲಚಂದ್ರ ಜಾರಕಿಹೋಳಿ ಹಾಗಲ್ಲದಿದ್ದರೆ ನಾವೇ ದೂರು ಸಲ್ಲಿಸುತ್ತೇವೆ" ಎಂದರು. "ಯುವತಿಗೆ ಐವತ್ತು ಲಕ್ಷ ಹಣ ಮತ್ತು ದುಬೈನಲ್ಲಿ ಉದ್ಯೋಗ ಭರವಸೆ ನೀಡಿ ಅವಳನ್ನು ಈ ಪ್ರಕರಣಕ್ಕೆ ಬಳಸಿಕೊಳ್ಳಲಾಗಿದೆ" ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕರ ಪಾತ್ರವಿಲ್ಲ
ಶಾಸಕ ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣದಲ್ಲಿ ಬಿಜೆಪಿಯ ಯಾವೊಬ್ಬ ನಾಯಕರ ಪಾತ್ರವಿಲ್ಲ ಎಂದ ಬಾಲಚಂದ್ರ ಜಾರಕಿಹೋಳಿ ಇದರಲ್ಲಿ ವಿರೋಧ ಪಕ್ಷಗಳು ಹಾಗೂ ಇತರರು ಸೇರಿದ್ದಾರೆ.ಸಮಗ್ರ ತನಿಖೆಯಾದಲ್ಲಿ ಹದಿನೈದು ದಿನದಲ್ಲೇ ಸತ್ಯ ಬಹಿರಂಗವಾಗಲಿದೆ ಎಂದರು.