ನಾಡಿನೆಲ್ಲೆಡೆ ಸಂಭ್ರಮದ ಮಹಾ ಶಿವರಾತ್ರಿ ಆಚರಣೆ, ಸರತಿ ಸಾಲಲ್ಲಿ ನಿಂತು ಪರಮೇಶ್ವರನ ದರ್ಶನ ಪಡೆದ ಭಕ್ತರು
ನಾಡಿನೆಲ್ಲೆಡೆ ಇಂದು ಮಹಾ ಶಿವರಾತ್ರಿಯನ್ನು ಸಡಗರ, ಸಂಭ್ರಮ ಗಳಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಶಿವ ದೇವಾಲಯಗಳನ್ನು ಬಣ್ಣದ ದೀಪಗಳಿಂದ , ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
Published: 11th March 2021 12:17 PM | Last Updated: 11th March 2021 01:00 PM | A+A A-

ಶಿವನ ದೇಗುಲದಲ್ಲಿ ವಿಶೇಷ ಪೂಜೆ
ಬೆಂಗಳೂರು: ನಾಡಿನೆಲ್ಲೆಡೆ ಇಂದು ಮಹಾ ಶಿವರಾತ್ರಿಯನ್ನು ಸಡಗರ, ಸಂಭ್ರಮ ಗಳಿಂದ ಆಚರಿಸಲಾಗುತ್ತಿದೆ. ವಿಶೇಷವಾಗಿ ಶಿವ ದೇವಾಲಯಗಳನ್ನು ಬಣ್ಣದ ದೀಪಗಳಿಂದ , ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.
ಬೆಂಗಳೂರಿನ ಗವಿ ಗಂಗಾಧರ ದೇವಸ್ಥಾನದಲ್ಲಿ ಮುಂಜಾನೆಯೇ ಶಿವನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಗಳ ವೈಭವ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಇಂದು ಬೆಳಗ್ಗೆಯಿಂದಲೇ ಯಿಂದಲೇ ರುದ್ರಾಭಿಷೇಕ, ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ವಿಶೇಷ ಪೂಜೆ, ಪುನಸ್ಕಾರ ಮತ್ತು ಬಿಲ್ವ ಪತ್ರೆ ಅರ್ಪಣೆ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳಿಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತರಿಗೆ ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರಿನ ವಿವಿಧ ಶಿವದೇಗುಲಗಳಲ್ಲಿ ಶಿವನ ದರ್ಶನಕ್ಕೆ ಅವಕಾಶ
ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಶಿವನ ಸನ್ನಿಧಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ಸೋಮೇಶ್ವರ ದೇವಸ್ಥಾನಗಳಲ್ಲಿ ಮುಂಜಾನೆಯೆ ಪರಮೇಶ್ವರನಿಗೆ ರುದ್ರಾಭಿಷೇಕದ ಮಜ್ಜನ, ಜಲಾಭಿಷೇಕ, ಪಂಚಾಮೃತ ಅಭಿಷೇಕಗಳನ್ನು ಮಾಡಲಾಗುತ್ತಿದೆ. ಬೆಂಗಳೂರಿನ ಶಿವನ ದೇವಾಲಯಗಳು ವಿಶೇಷ ಅಲಂಕಾರಗಳಿಂದ ಕಂಗೊಳಿಸುತ್ತಿವೆ. ಇಡೀ ದೇವಾಲಯವನ್ನು ತಳಿರು ತೋರಣದಿಂದ ಸಿಂಗರಿಸಿ ಕಬ್ಬು, ಹೂವಿನಿಂದ ಅದ್ದೂರಿ ಅಲಂಕಾರ ಮಾಡಲಾಗಿದೆ. ರಾತ್ರಿ ಜಾಗರಣೆ ಹಿನ್ನೆಲೆ, ನಾಳೆ ಬೆಳಗ್ಗೆಯವರೆಗೂ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಚಾಮರಾಜಪೇಟೆಯ ಈದ್ಗಾ ಮೈದಾನದ ಬಳಿ ಇರುವ ಮಹದೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದ್ದು, ಭಕ್ತಾದಿಗಳು ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
Devotees offer special pooja on the occassion of Mahashivarathri at Lord Trineshwara Swamy in #Mysuru Palace premises on Thursday@NewIndianXpress @XpressBengaluru @santwana99 @ShivascribeTNIE @vinodkumart5 pic.twitter.com/L0Rf6D3oLI
— udayshankar S (@UdayUdayphoto2) March 11, 2021
ಮೈಸೂರು ಅರಮನೆ ದೇಗುಲದಲ್ಲಿ ವಿಶೇಷ ಆಚರಣೆ ನಡೆಯುತ್ತಿದ್ದು ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ಚಿನ್ನದ ಕೊಳಗ (ಮುಖವಾಡ) ಧಾರಣೆ ಮಾಡಲಾಗಿದೆ. ಬರೋಬ್ಬರಿ 11 ಕೆಜಿ ತೂಕದ ಅಪರಂಜಿ ಚಿನ್ನದಿಂದ ಮಾಡಿರುವ ಕೊಳಗ ಇದಾಗಿದ್ದು ಶಿವರಾತ್ರಿ ದಿನದಂದು ಮಾತ್ರ ಶ್ರೀ ತ್ರೀನೇಶ್ವರ ದೇವಾಲಯದ ಶಿವಲಿಂಗಕ್ಕೆ ಧಾರಣೆ ಮಾಡಲಾಗುತ್ತದೆ. ಇದನ್ನು ಮಹಾರಾಜ ಜಯ ಚಾಮರಾಜ ಒಡೆಯರ್ ಅವರು ನೀಡಿದ್ದ ಕೊಡುಗೆ. ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ. ಚಿನ್ನದ ಮುಖವಾಡ ಧಾರಣೆ ಮಾಡಿದ ಶಿವಲಿಂಗ ನೋಡಲು ಭಕ್ತ ಸಾಗರವೇ ಹರಿದು ಬರುತ್ತಿದೆ.
ಇತ್ತ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇಗುಲದಲ್ಲಿ ವಿಜೃಂಭಣೆಯಿಂದ ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಬೆಳಗಿನಿಂದಲೇ ದೇವಾಲಯಕ್ಕೆ ಆಗಮಿಸಿದ್ದಾರೆ. ಸರದಿ ಸಾಲಿನಲ್ಲಿ ಭಕ್ತರಿಗೆ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರೆಲ್ಲ ಆತ್ಮ ಲಿಂಗ ಸ್ಪರ್ಶ ಪೂಜೆ ಮಾಡಿ ಶಿವನ ಆಶೀರ್ವಾದ ಪಡೆಯುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಾದಪ್ಪನಿಗೆ ಹಣ್ಣುಗಳಿಂದ ಶೃಂಗಾರ ಮಾಡಲಾಗಿದೆ. ಶಿವನಿಗೆ ಸೇಬು, ದ್ರಾಕ್ಷಿ ಹಣ್ಣುಗಳಿಂದ ಶೃಂಗಾರ ಮಾಡಲಾಗಿದೆ. ವಿವಿಧ ಬಗೆಯ ತರಕಾರಿಗಳಿಂದಲೂ ಮಾದಪ್ಪನಿಗೆ ಅಲಂಕಾರ ಮಾಡಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾದಪ್ಪನಿಗೆ ವಿಶೇಷ ಪೂಜೆ ಕೈಗೊಳ್ಳಲಾಗಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಭಕ್ತರಿಗೆ ಇಂದಿನಿಂದ ನಾಲ್ಕು ದಿನಗಳ ಕಾಲ ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಕೇವಲ ಮಲೆ ಮಹದೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಬರುವ ಪ್ರತಿಯೊಬ್ಬರೂ ಗುರುತಿನ ಚೀಟಿ ತೋರಿಸುವುದು ಕಡ್ಡಾಯ ಮಾಡಲಾಗಿದೆ.
ಕಲಬುರಗಿ ನಗರದ ಹೊರವಲಯದಲ್ಲಿರುವ ಬ್ರಹ್ಮಕುಮಾರಿ ಆಶ್ರಮದಲ್ಲಿರುವ ಶಿವಲಿಂಗಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಮತ್ತು ಮೌಂಟ್ ಅಬುದಿಂದ 1 ಲಕ್ಷ 20 ಸಾವಿರ ಮುತ್ತುಗಳಿಂದ ಶಿವಲಿಂಗಕ್ಕೆ ಅಲಂಕಾರ ಮಾಡಲಾಗಿದೆ. 31 ಅಡಿ ಎತ್ತರದ ಮುತ್ತಿನ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮುತ್ತಿನ ವಿಶೇಷ ಶಿವಲಿಂಗ ನೋಡಲು ಭಕ್ತರು ಆಗಮಿಸುತ್ತಿದ್ದಾರೆ.