ಸಾರಿಗೆ ನೌಕರರಿಗೆ ಸಿಹಿ ಸುದ್ದಿ: ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ

ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ಹಿಂದೆ ನೌಕರರ ಬೇಡಿಕೆಯಂತೆ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

Published: 11th March 2021 02:32 PM  |   Last Updated: 11th March 2021 02:32 PM   |  A+A-


KSRTC Bus Stand

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : The New Indian Express

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈ ಹಿಂದೆ ನೌಕರರ ಬೇಡಿಕೆಯಂತೆ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿದೆ.

ಹೌದು.. ರಾಜ್ಯ ರಸ್ತೆ ಸಾರಿಗೆ ಇಲಾಖೆಯ ಅಧೀನದಲ್ಲಿರುವ ನಾಲ್ಕು ಸಾರಿಗೆ ನಿಗಮಗಳಲ್ಲಿನ ಮೇಲ್ವಿಚಾರಕರನ್ನು ಬಿಟ್ಟು ಮೂರು ಮತ್ತು ನಾಲ್ಕನೇ ಶ್ರೇಣಿಯ ಕಾಯಂ ನೌಕರರ ಅಂತರ ನಿಗಮ ವರ್ಗಾವಣೆಗೆ ಅವಕಾಶ ಕಲ್ಪಿಸಿ ಮಂಗಳವಾರ ಮಾರ್ಗಸೂಚಿ ಹೊರಡಿಸಲಾಗಿದೆ.

ಸಾರಿಗೆ ನೌಕರರು ಇತ್ತೀಚೆಗೆ ನಡೆಸಿದ್ದ ಮುಷ್ಕರದ ವೇಳೆ ಮುಂದಿಟ್ಟಿದ್ದ ಬೇಡಿಕೆಗಳಲ್ಲಿ ಅಂತರ ನಿಗಮಗಳ ವರ್ಗಾವಣೆ ಪ್ರಮುಖವಾಗಿತ್ತು. ಅನೇಕ ವರ್ಷಗಳಿಂದ ಈ ಬೇಡಿಕೆಗೆ ಸರ್ಕಾರದಿಂದ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿಂದೆ ಆರು ಬೇಡಿಕೆಗಳನ್ನು ಈಡೇರಿಸಿದ್ದ ಇಲಾಖೆ, ನೌಕರರ ಮತ್ತೊಂದು ಬೇಡಿಕೆ ಈಡೇರಿಸಿದ್ದು, ಅಂತರ ನಿಗಮ ವರ್ಗಾವಣೆಗೂ ಅವಕಾಶ ಕಲ್ಪಿಸಿದೆ.

ನೂತನ ಮಾರ್ಗಸೂಚಿಗಳ ಪ್ರಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ನೌಕರರನ್ನು ಅವರ ಕೋರಿಕೆಯ ಮೇರೆಗೆ ಅಂತರ ನಿಗಮಗಳಿಗೆ ವರ್ಗಾವಣೆ ಮಾಡಬಹುದು. ವರ್ಷಕ್ಕೆ ಒಂದು ಬಾರಿ ಮಾತ್ರ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ನಡೆಸಬಹುದು ಎಂದು ಹೇಳಲಾಗಿದೆ.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಇತರ ಮೂರು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ವರ್ಗಾವಣೆ ಪ್ರಾಧಿಕಾರವಾಗಿರುತ್ತದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಕಡ್ಡಾಯವಾಗಿದ್ದು, ಸೂಕ್ತ ತಂತ್ರಾಂಶ ಅಭಿವೃದ್ಧಿಪಡಿಸಿ, ಪ್ರತಿ ವರ್ಷ ಏಪ್ರಿಲ್‌ 1ರಿಂದ 30ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಕಲ್ಯಾಣ ಕರ್ನಾಟಕ ಸ್ಥಳೀಯ ಅಭ್ಯರ್ಥಿಗಳಿಗೂ ಮೀಸಲಾತಿ ಒದಗಿಸಬೇಕು. ಪ್ರತಿವರ್ಷ ಮೇ ತಿಂಗಳಿನಲ್ಲಿ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 10 ವರ್ಷ ಸೇವಾವಧಿ ಪೂರ್ಣಗೊಳಿಸಿರುವ ಕಾಯಂ ನೌಕರರು ಮಾತ್ರ ವರ್ಗಾವಣೆಗೆ ಅರ್ಹತೆ ಹೊಂದಿರುತ್ತಾರೆ. 

ಯಾರಿಗೆ ಅನ್ವಯಿಸುವುದಿಲ್ಲ
ಇಲಾಖೆಯಲ್ಲಿ ಶಿಸ್ತು ಪ್ರಕರಣ ಬಾಕಿ ಇರುವ ನೌಕರರು ವರ್ಗಾವಣೆಗೆ ಅರ್ಹರಲ್ಲ. ಸೇವಾವಧಿಯಲ್ಲಿ ಒಮ್ಮೆ ಮಾತ್ರ ಅಂತರ ನಿಗಮ ವರ್ಗಾವಣೆಗೆ ಅವಕಾಶವಿದೆ. ಆದೇಶ ಹೊರಬಿದ್ದ ಬಳಿಕ ಬದಲಾವಣೆಗೆ ಅವಕಾಶವಿಲ್ಲ ಎಂದು ಇಲಾಖೆ ತಿಳಿಸಿದೆ.  ಕಾರ್ಯನಿರತ ವೃಂದದ ಶೇಕಡ 2ರಷ್ಟು ಸಿಬ್ಬಂದಿಯನ್ನು ಮಾತ್ರ ಇತರ ಸಾರಿಗೆ ನಿಗಮಗಳಿಗೆ ವರ್ಗಾವಣೆ ಮಾಡಬಹುದು. ಪ್ರತಿ ನಿಗಮದಲ್ಲಿ ಮಾಡುವ ಅಂತರ ನಿಗಮ ವರ್ಗಾವಣೆಯಲ್ಲಿ ಶೇ 5ರಷ್ಟನ್ನು ಪತಿ–ಪತ್ನಿ ಪ್ರಕರಣಗಳಿಗೆ ಮೀಸಲಿಡಬೇಕು. ವರ್ಗಾವಣೆ ಅರ್ಜಿಗಳಿಗೆ ಸೇವಾ ಜೇಷ್ಠತೆ ಆಧಾರದಲ್ಲಿ ಆದ್ಯತೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. 

ನಿಗಮದ ನಿಯಮಗಳ ಅನ್ವಯ
ವರ್ಗಾವಣೆಗೊಂಡ ನೌಕರರು ಮೂಲ ನಿಗಮದಲ್ಲಿ ಪಡೆಯುತ್ತಿದ್ದ ವೇತನವನ್ನು ಹೊರತು ಪಡಿಸಿ ಇತರ ಸೌಲಭ್ಯಗಳ ವಿಚಾರದಲ್ಲಿ ವರ್ಗಾವಣೆ ಹೊಂದುವ ನಿಗಮದ ನಿಯಮಗಳೇ ಅನ್ವಯವಾಗುತ್ತದೆ. ವರ್ಗಾವಣೆಗೊಂಡ ನಿಗಮದ ಜೇಷ್ಠತಾ ಪಟ್ಟಿಯ ಕೊನೆಯಲ್ಲಿ ಈ ನೌಕರರ ಹೆಸರನ್ನು ಸೇರಿಸಬೇಕು. ವರ್ಗಾವಣೆ ಭತ್ಯೆಯ ಸೌಲಭ್ಯ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. 
 


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp