ಡಿ.ಕೆ.ಶಿವಕುಮಾರ್ ಆಪ್ತರಿಂದ ವಶಕ್ಕೆ ಪಡೆದಿದ್ದ ಹಣ ಹಿಂದಿರುಗಿಸಿ: ಸಿಬಿಐಗೆ 'ಹೈ' ಆದೇಶ

ಡಿ.ಕೆ.ಶಿವಕುಮಾರ್ ಅವರ ಆಪ್ತರಿಂದ ವಶಕ್ಕೆ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಸಿಬಿಐ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ. 

Published: 12th March 2021 07:51 AM  |   Last Updated: 12th March 2021 05:21 PM   |  A+A-


DK Shivakumar

ಡಿಕೆ.ಶಿವಕುಮಾರ್

Posted By : Manjula VN
Source : The New Indian Express

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರ ಆಪ್ತರಿಂದ ವಶಕ್ಕೆ ಪಡೆದಿದ್ದ ಹಣವನ್ನು ಹಿಂದಿರುಗಿಸುವಂತೆ ಸಿಬಿಐ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶಿಸಿದೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತ ಸಚಿನ್ ನಾರಾಯಣ ಅವರ ರೂ.5.48 ಲಕ್ಷ ಮತ್ತು ಅವರಿಗೇ ಸೇರಿದ ವೆಲ್‌ವರ್ತ್‌ ಸಾಫ್ಟ್‌ವೇರ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ರೂ.47.98 ಲಕ್ಷ ಹಿಂದಿರುಗಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಶಿವಕುಮಾರ್ ಮತ್ತು ಅವರ ಆಪ್ತರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾಗ ಸಿಬಿಐ ಈ ಹಣವನ್ನು ವಶಪಡಿಸಿಕೊಂಡಿತ್ತು. ಅದನ್ನು ಹಿಂದಿರುಗಿಸಲು ಆದೇಶಿಸುವಂತೆ ಕೋರಿ ಸಚಿನ್‌ ನಾರಾಯಣ್‌ ಅವರು ನ್ಯಾಯಾಲಯದಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. 

ತಮ್ಮ ಕಂಪನಿ ವಿವಿಧ ಟೆಲಿವಿಷನ್‌ ಚಾನೆಲ್‌ಗಳಿಂದ ಕೇಬಲ್‌ ನೆಟ್‌ವರ್ಕ್‌ಗಳಿಗೆ ಸಂಪರ್ಕ ಒದಗಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಕೇಬಲ್‌ ಆಪರೇಟರ್‌ಗಳು ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳ ಬಾಬ್ತು ಪಾವತಿಸಿದ್ದ ಹಣವನ್ನು ಕಚೇರಿಯಲ್ಲಿ ಇಡಲಾಗಿತ್ತು. ಬ್ಯಾಂಕ್‌ಗೆ ಜಮೆ ಮಾಡುವ ಮೊದಲು ಅದನ್ನು ಸಿಬಿಐ ವಶಕ್ಕೆ ಪಡೆದಿತ್ತು ಎಂದು ಸಚಿನ್‌ ನಾರಾಯಣ್‌ ಅರ್ಜಿಯಲ್ಲಿ ದೂರಿದ್ದರು. ಈ ಮೊತ್ತ ಮರಳಿಸುವಂತೆ ಸಿಬಿಐಗೆ ನಿರ್ದೇಶನ ನೀಡುವಂತೆ ವೈಯಕ್ತಿಕವಾಗಿ ಮತ್ತು ಕಂಪನಿಯಿಂದ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

‘ಡಿ.ಕೆ.ಶಿವಕುಮಾರ್ ಅವರ ಪತ್ನಿ ನಡೆಸುತ್ತಿರುವ ವ್ಯವಹಾರದಲ್ಲಿ ಸಚಿನ್ ನಾರಾಯಣ್ ಪಾಲುದಾರರಾಗಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್‌ಗಳು ಸಂಗ್ರಹಿಸಿದ ಮೊತ್ತವನ್ನು ನೇರವಾಗಿ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದರಿಂದ ಅರ್ಜಿದಾರರ ವಿವರಣೆ ನಂಬಲು ಸಾಧ್ಯವಿಲ್ಲ’ ಎಂದು ಸಿಬಿಐ ವಿಶೇಷ ಅಭಿಯೋಜಕರು ವಾದಿಸಿದರು.

ಡಿ.ಕೆ.ಶಿವಕುಮಾರ್ ಅಥವಾ ಅವರ ಪತ್ನಿ ವಿರುದ್ಧ ದಾಖಲಾಗಿರುವ ಆದಾಯಕ್ಕೆ ಮೀರಿದ ಆಸ್ತಿ ಪ್ರಕರಣಕ್ಕೂ ಸಚಿನ್‌ಗೂ ಸಂಬಂಧ ಇದೆ ಎಂಬುದಕ್ಕೆ ಪ್ರಾಥಮಿಕ ಪುರಾವೆಗಳು ಕಾಣಿಸುತ್ತಿಲ್ಲ ಎಂದು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಅಭಿಪ್ರಾಯಪಟ್ಟಿದ್ದು, ಹಣವನ್ನು ಹಿಂದಿರುಗಿಸುವಂತೆ ಆದೇಶ ನೀಡಿದೆ. 


Stay up to date on all the latest ರಾಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp