ಐಎಂಎ ಪ್ರಕರಣ: ಮಾಜಿ ಬಿಡಿಎ ಅಧಿಕಾರಿಗಳು, ಐಎಂಎ ನಿರ್ದೇಶಕರ ವಿರುದ್ಧ ಪ್ರಕರಣ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದೀಗ ಮಾಜಿ ಬಿಡಿಎ ಅಧಿಕಾರಿಗಳು, ಐಎಂಎ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Published: 13th March 2021 01:29 PM  |   Last Updated: 13th March 2021 01:29 PM   |  A+A-


IMA scam accused Mohammed Mansoor Khan brought to Bengaluru By SIT Officials

ಐಎಂಎ ವಂಚನೆ ಪ್ರಕರಣದ ಕಿಂಗ್ ಪಿನ್ ಮನ್ಸೂರ್ ಖಾನ್ (ಸಂಗ್ರಹ ಚಿತ್ರ)

Posted By : Srinivasamurthy VN
Source : The New Indian Express

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದೀಗ ಮಾಜಿ ಬಿಡಿಎ ಅಧಿಕಾರಿಗಳು, ಐಎಂಎ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಆಗಿನ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಐಎಂಎ ನಿರ್ದೇಶಕರು ಸೇರಿದಂತೆ 7 ಆರೋಪಿಗಳ ವಿರುದ್ಧ ಸಿಬಿಐ ಅಧಿಕಾರಿಗಳು ಸೆಷನ್ಸ್ ನ್ಯಾಯಾಧೀಶರ ಎದುರು ಶುಕ್ರವಾರ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದಾರೆ.

5 ಕೋಟಿ ರೂ ಲಂಚ ಪಡೆದಿದ್ದ ಅಧಿಕಾರಿಗಳು
ಹಗರಣದಲ್ಲಿ ಪಿ.ಡಿ.ಕುಮಾರ್‌ ಪಾತ್ರದ ಕುರಿತು ಸವಿವರವಾಗಿ ಚಾರ್ಜ್ ಶೀಟ್‌ನಲ್ಲಿ ವಿವರಿಸಲಾಗಿದೆ. ಬಿಡಿಎ ಕಾರ್ಯನಿರ್ವಾಹಕ ಎಂಜಿನಿಯರ್ ಪಿ.ಡಿ.ಕುಮಾರ್, ಐಎಂಎ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹ್ಮದ್ ಮನ್ಸೂರ್ ಖಾನ್, ನಿರ್ದೇಶಕರಾದ ನಜಮುದ್ದೀನ್ ಅಹ್ಮದ್, ವಾಸೀಂ, ನವೀದ್ ಆಹ್ಮದ್, ನಜಿರ್ ಹುಸೇನ್ ಮತ್ತು ಐಎಂಎ ಕಂಪನಿ ವಿರುದ್ಧ ಆರೋಪ ಪಟ್ಟಿಸಲ್ಲಿಸಲಾಗಿದೆ. ಚಾರ್ಜ್ ಶೀಟ್ ನಲ್ಲಿರುವ ಅಂಶಗಳ ಅನ್ವಯ, ಕಂದಾಯ ಇಲಾಖೆಯ ಅಧಿಕಾರಿಗಳು ಐಎಂಎ ಸಂಸ್ಥೆಯ ಪರವಾಗಿ ವರದಿ ನೀಡುವಂತೆ ಅಂದಿನ ಬೆಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಬಿಡಿಎನ ಅಂದಿನ ಕಾರ್ಯನಿರ್ವಾಹಕ ಇಂಜಿನಿಯರ್ ಪಿ.ಡಿ.ಕುಮಾರ್ ಸೂಚನೆಯಂತೆ, ಐಎಂಎ ಸಂಸ್ಥೆಯ ಸಿಇಒ ಹಾಗೂ ಎಂಡಿಯ ನಿರ್ದೇಶನದಂತೆ ಸುಮಾರು 5 ಕೋಟಿ ರೂ.ಗಳನ್ನು ನಾಲ್ಕು ಕಂತುಗಳಾಗಿ (1.5 ಕೋಟಿ, 1 ಕೋಟಿ, 1.5 ಕೋಟಿ ಹಾಗೂ 1 ಕೋಟಿ ರೂ.) 2019ರ ಎಪ್ರಿಲ್-ಮೇ ನಡುವೆ ನೀಡಲಾಗಿದೆ. 

ಕಂದಾಯ ಇಲಾಖೆಯಿಂದ ಐಎಂಎ ಪರವಾಗಿ ನಿರಪೇಕ್ಷಣಾ ಪತ್ರ ಕೊಡಿಸಲು ನಾಲ್ಕು ಕಂತುಗಳಲ್ಲಿ ಆರೋಪಿ ಪಿ.ಡಿ.ಕುಮಾರ್ 5 ಕೋಟಿ ರೂ ಲಂಚ ಸ್ವೀಕರಿಸಿದ್ದ. 2019 ಏಪ್ರಿಲ್-ಮೇ ತಿಂಗಳಲ್ಲಿ ಎರಡು ಬಾರಿ ಒಂದೂವರೆ ಕೋಟಿ ರೂ. ಮತ್ತು ಎರಡು ಬಾರಿ ಒಂದು ಕೋಟಿ ರೂ.ಗಳನ್ನು ಐಎಂಎ ವ್ಯವಸ್ಥಾಪಕ ನಿರ್ದೇಶಕ ಮೇರೆಗೆ ಪಾವತಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಐಎಂಎ ಹೂಡಿಕೆದಾರರಿಗೆ ಇಂದಿನಿಂದ ಹಣ ಜಮೆ ಬೆಂಗಳೂರು ನಗರ ಜಿಲ್ಲೆಯ ಉತ್ತರ ವಿಭಾಗದ ಸಹಾಯಕ ಆಯಕ್ತರು 'ಐಎಂಎ ಕಂಪನಿಯು ಅವ್ಯವಹಾರ ನಡೆಸುತ್ತಿಲ್ಲ' ಎಂಬ ವರದಿ ನೀಡಲಾಗಿತ್ತು.

ಆ ವರದಿಯ ಆಧಾರದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಕಂಪನಿಯ ಪರವಾಗಿ ನಿರಪೇಕ್ಷಣಾ ಪತ್ರ ಕೊಡಿಸುವುದಾಗಿ ಹೇಳಿ ಪಿ.ಡಿ.ಕುಮಾರ್ ಹಣ ಪಡೆದುಕೊಂಡಿದ್ದ. ಆದರೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿದ್ದರು. ಅಲ್ಲದೆ, ವರದಿಯ ಕುರಿತು ಕಾನೂನು ಇಲಾಖೆಯ ಅಭಿಪ್ರಾಯಕ್ಕಾಗಿ ಕಳುಹಿಸಿಕೊಟ್ಟಿದ್ದರು. ಕಂಪನಿಯ ವಿರುದ್ಧ ಹೆಚ್ಚಿನ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಯನ್ನು ಕೋರಿದ್ದರು.

ಆದರೆ, ಅಂದಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಾಯಕ ಆಯುಕ್ತರು ಸಲ್ಲಿಸಿದ್ದ ವರದಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ಕಾನೂನು ಇಲಾಖೆಯಿಂದ ಅಭಿಪ್ರಾಯ ಕೋರಿದ್ದಲ್ಲದೆ, ಈ ವಿಚಾರದಲ್ಲಿ ತನಿಖೆ ನಡೆಸುವಂತೆ ಡಿಜಿಪಿಗೆ ಶಿಫಾರಸ್ಸು ಮಾಡಿದ್ದರು. ಐಎಂಎ ಸಂಸ್ಥೆಯವರು ತಿಳಿಸಿದ್ದ ಕೆಲಸ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಬಿಡಿಎ ಕಾರ್ಯನಿರ್ವಾಹಕ ಇಂಜಿನಿಯರ್ ಗೆ ತಾವು ಪಾವತಿಸಿರುವ ಹಣ ಹಿಂದಿರುಗಿಸುವಂತೆ ಒತ್ತಡ ಹೇರಿದ್ದರು. ಅದರಂತೆ, ಆತ 30 ಲಕ್ಷ ರೂ.ಗಳನ್ನು ವಾಪಸ್ ನೀಡಿದ್ದು, ಉಳಿದ ಹಣ ಪಾವತಿಸುವವರೆಗೆ ಭದ್ರತೆಗಾಗಿ 2 ಹಾಗೂ 2.50 ಕೋಟಿ ರೂ.ಮೌಲ್ಯದ ಚೆಕ್‍ಗಳನ್ನು ಐಎಂಎಸಂಸ್ಥೆಗೆ ನೀಡಿರುವುದು ತಿಳಿದು ಬಂದಿದೆ ಎಂದು ಸಿಬಿಐ ಹೇಳಿದೆ.

ತನಿಖೆ ವೇಳೆ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿದ್ದ ಈ ಎರಡು ಚೆಕ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಐಎಂಎ ಸಂಸ್ಥೆಯ ನಿರ್ದೇಶಕರ ನಡುವೆ ನಡೆದಿರುವ ವಾಟ್ಸಪ್ ಚಾಟ್‍ಗಳ ವಿವರವನ್ನು ಕಲೆ ಹಾಕಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಪ್ರಕರಣಗಳಲ್ಲಿಯೂ ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲು ಮಾಡಿದೆ. ಅಲ್ಲದೆ, ಹಲವು ಚಾರ್ಜ್‍ಶೀಟ್‍ಗಳನ್ನು ದಾಖಲು ಮಾಡಿದೆ ಎಂದು ತಿಳಿದುಬಂದಿದೆ.
 


Stay up to date on all the latest ರಾಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp