ಕೃಷಿ ಕಾನೂನುಗಳ ವಿರುದ್ಧ ರಾಜ್ಯದಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರೈತ ಮುಖಂಡ ಟಿಕಾಯತ್ ಭಾಗಿ
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ಮತ್ತು ವಿದ್ಯುತ್ ವಲಯ ಖಾಸಗೀಕರಣ ವಿರುದ್ಧದ ಹೋರಾಟವನ್ನು ವಿಸ್ತರಿಸುವ ಭಾಗವಾಗಿ ರೈತ ಪಂಚಾಯತ್ ಸಹಯೋಗದೊಂದಿಗೆ ಬೆಳಗಾವಿ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ರೈತ ಚಳುವಳಿ ನಡೆಸಲು ಯೋಜಿಸಲಾಗಿದ್ದು, ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ್ ಕಿಸಾನ್ ಮೋರ್ಚಾ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.
Published: 13th March 2021 07:24 PM | Last Updated: 13th March 2021 07:24 PM | A+A A-

ಚುಕ್ಕಿ ನಂಜುಂಡಸ್ವಾಮಿ ಸುದ್ದಿಗೋಷ್ಠಿಯ ಚಿತ್ರ
ಬೆಳಗಾವಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳು ಮತ್ತು ವಿದ್ಯುತ್ ವಲಯ ಖಾಸಗೀಕರಣ ವಿರುದ್ಧದ ಹೋರಾಟವನ್ನು ವಿಸ್ತರಿಸುವ ಭಾಗವಾಗಿ ರೈತ ಪಂಚಾಯತ್ ಸಹಯೋಗದೊಂದಿಗೆ ಬೆಳಗಾವಿ ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ರೈತ ಚಳುವಳಿ ನಡೆಸಲು ಯೋಜಿಸಲಾಗಿದ್ದು, ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ್ ಕಿಸಾನ್ ಮೋರ್ಚಾ ಮುಖಂಡೆ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಭೂ ಸುಧಾರಣೆ ಕಾಯ್ದೆ, ಅತ್ಯಾವಶ್ಯಕ ಸರಕುಗಳ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಛಕ್ತಿ ಖಾಸಗೀಕರಣ ಬಿಲ್, ಕೃಷಿ ಒಪ್ಪಂದ ಬಿಲ್ ವಿರುದ್ಧ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಅಡಿಯಲ್ಲಿ ಲಕ್ಷಾಂತರ ರೈತರು ನವೆಂಬರ್ 26ರಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಪ್ರತಿಭಟನೆಯನ್ನು ತೀವ್ರಗೊಳಿಸಲು ದಕ್ಷಿಣ ಭಾರತ ರಾಜ್ಯಗಳಿಗೂ ರೈತ ಚಳುವಳಿಯನ್ನು ವಿಸ್ತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಹಾವೇರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಲು ಯೋಜಿಸಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲೂ ರೈತ ಪಂಚಾಯತ್ ನಡೆಸಲಾಗುವುದು, ಮಾರ್ಚ್ 31 ರಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದ ರಸ್ತೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ, ಬಾಗಲಕೋಟೆ ಮತ್ತಿತರ ಉತ್ತರ ಕರ್ನಾಟಕ ಹಾಗೂ ನೆರೆಯ ಮಹಾರಾಷ್ಟ್ರದ ರೈತರು ಬೆಳಗಾವಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ ಚುಕ್ಕಿ ನಂಜುಂಡಸ್ವಾಮಿ, ಕೃಷಿ ಕಾನೂನುಗಳ ಪ್ರತಿಯನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಹೇಳಿದರು.