
ಸಾಂದರ್ಭಿಕ ಚಿತ್ರ
ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪಾದಚಾರಿ, ಬೈಕ್ ಸವಾರರು ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಯಪುರ ರಾಷ್ಟ್ರೀಯ ಹೆದ್ದಾರಿ 150 ಎ ಬಳಿ ಈ ಘಟನೆ ನಡೆದಿದ್ದು, ಪಾದಚಾರಿಯೊಬ್ಬರಿಗೆ ವೇಗವಾಗಿ ಬಂದ ಬೈಕ್ ಗುದ್ದಿದ ಪರಿಣಾಮ ಸ್ಥಳದಲ್ಲೇ ಪಾದಚಾರಿ ಹಾಗೂ ಬೈಕ್ ಸವಾರ ಮೃತಪಟ್ಟಿದ್ದಾರೆ. ಮೃತರನ್ನು ದಾಸರ ಮುತ್ತಯ್ಯ (60), ಪವನ್ ಕುಮಾರ್ (25) ಎಂದು ಗುರುತಿಸಲಾಗಿದೆ.
ವೇಗವಾಗಿ ಬಂದ ಬುಲೆಟ್ ಬೈಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಾಸರ ಮುತ್ತಯ್ಯ ಅವರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಕೆಳಗೆ ಬಿದ್ದ ಪರಿಣಾಮ ಬೈಕ್ ಸವಾರನ ಮೇಲೆ ಅಪರಿಚಿತ ವಾಹನ ಹರಿದು ಬೈಕ್ ಸವಾರ ಪವನ್ ಕುಮಾರ್ ಕೂಡ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಬೈಕ್ನಲ್ಲಿದ್ದ ಇನ್ನೋರ್ವ ವ್ಯಕ್ತಿ ಉದಯಕುಮಾರ್ಗೆ ಗಂಭೀರ ಗಾಯವಾಗಿದ್ದು, ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಯುವಕರು ಬೈಕ್ ಮೂಲಕ ತೆರಳುತ್ತಿದ್ದರು ಎನ್ನಲಾಗಿದೆ. ಘಟನೆಗೆ ಬೈಕ್ ಸವಾರನ ವೇಗದ ಚಾಲನೆಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.