ಪ್ರಧಾನಮಂತ್ರಿ 'ಪರೀಕ್ಷಾ ಪೆ ಚರ್ಚಾ'ಗೆ ಕುಂದಾಪುರದ ಚಾರ್ಮಕ್ಕಿ ಶಾಲೆಯ ಅನುಷಾ ಆಯ್ಕೆ
ಕುಂದಾಪುರದ ಅಲ್ಪಾಡಿ-ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ, 'ಪರೀಕ್ಷಾ ಪೆ ಚರ್ಚಾ' ಎನ್ನುವ ಪ್ರಧಾನಿ ನರೇಂದ್ರ ಮೋದಿಯವರೊಡನೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
Published: 19th March 2021 12:15 PM | Last Updated: 19th March 2021 01:17 PM | A+A A-

ಅನುಷಾ
ಕುಂದಾಪುರ: ಕುಂದಾಪುರದ ಅಲ್ಪಾಡಿ-ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ, 'ಪರೀಕ್ಷಾ ಪೆ ಚರ್ಚಾ' ಎನ್ನುವ ಪ್ರಧಾನಿ ನರೇಂದ್ರ ಮೋದಿಯವರೊಡನೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೇಶಾದ್ಯಂತ ಒಟ್ಟು 10.39 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ 1,500 ಅರ್ಜಿಗಳನ್ನು ಅಂತಿಮ ಸುತ್ತಿನ ಆಯ್ಕೆಗೆ ತೆಗೆದುಕೊಳ್ಳಲಾಗಿದ್ದು ಈ ಪೈಕಿ 30 ಮಂದಿ ಪ್ರಧಾನ ಮಂತ್ರಿಗಳೊಂದಿಗೆ ನೇರವಾಗಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಆರ್ಡಿ ಶಾಲೆಯ ಅನುಷಾ ಆಯ್ಕೆಯಾಗಿದ್ದಾರೆ.
ದೇಶಾದ್ಯಂತದ 30 ಶಾಲೆಗಳ ಪೈಕಿ ಕುಂದಾಪುರದ ಆರ್ಡಿ ಶಾಲೆ ಆಯ್ಕೆಯಾಗಿದೆ. ಕರ್ನಾಟಕದಿಂದ ಎರಡು ಶಾಲೆಗಳು ಆಯ್ಕೆಯಾಗಿದ್ದು ಬೆಂಗಳೂರಿನ ಒಂದು ಶಾಲೆ ಹೊರತಾಗಿ ಕುಂದಾಪುರದ ಆರ್ಡಿ ಶಾಲೆಯು ಮಾತ್ರವೇ ಈ ವಿಶೇಷ ಕಾರ್ಯಕ್ರಮಕ್ಕೆ ಆಯ್ಕೆಯಾಗಿದೆ ಎನ್ನುವುದು ಗಮನಾರ್ಹ.
ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಮಾಡಿದ 'ಪರೀಕ್ಷಾ ಪೆ ಚರ್ಚಾ' ಎಂಬ ಪ್ರಚಾರ ವಿಡಿಯೋವನ್ನು ಪ್ರಧಾನಿ ವೀಕ್ಷಿಸಲಿದ್ದಾರೆ. ಸಂವಾದದ ಸಮಯದಲ್ಲಿ, ಈ ವೀಡಿಯೊವನ್ನು ಸಹ ಅವರಿಗೆ ರವಾನಿಸಲಾಗುವುದು ಇದಕ್ಕಾಗಿ ದೆಹಲಿಯ ತಂಡವೊಂದು ಶಾಲೆಗೆ ಭೇಟಿ ನೀಡಲಿದೆ. ಸಂವಾದದ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ.
ಅನುಷಾ ಅಲ್ಬಾಡಿ-ಅರ್ಡಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಗುಡ್ಡೆಂಗಡಿಯ ಕೃಷ್ಣ ಕುಲಾಲ್-ಜಯಲಕ್ಷ್ಮಿ ದಂಪತಿಗಳ ಪುತ್ರಿ. ಮುಂದೆ ತಾನು ಎಂಜಿನಿಯರಿಂಗ್ ಶಿಕ್ಷಣ ಪಡೆಯುವ ಕನಸು ಹೊಂದಿರುವ ಅನುಷಾ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸಲು ಇಡೀ ದೇಶದ 30 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ."ಈ ಶಾಲೆಯ ವಿದ್ಯಾರ್ಥಿನಿ ಎನಿಸಲು ನಾನು ಅದೃಷ್ಟ ಮಾಡಿದ್ದೇನೆ. ನನಗೆ ಇಂತಹಾ ಅಪೂರ್ವ ಅವಕಾಶ ಸಿಕ್ಕಿದೆ ಎಂದು ನಂಬುವುದು ಕಷ್ಟವಾಗುತ್ತಿದೆ" ಎಂದು ಅನುಷಾ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕಿ ಸುರೇಶ್ ಮರಕಾಲ ಮತ್ತಿತರೆ ಶಿಕ್ಷಕರಿಗೆ ತನಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಅನುಷಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ.